ವಿಶ್ವವಿದ್ಯಾನಿಲಯದಲ್ಲಿ ಜಗಳದ ನಂತರ ದೆಹಲಿ ಆಸ್ಪತ್ರೆಯೊಳಗೆ ಗುಂಡಿನ ದಾಳಿ ನಡೆಸಿದ ಜಾಮಿಯಾ ವಿದ್ಯಾರ್ಥಿ

ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬ ಗುರುವಾರ ಹೋಲಿ ಫ್ಯಾಮಿಲಿ ಆಸ್ಪತ್ರೆ ಆವರಣದಲ್ಲಿ ಮತ್ತೊಬ್ಬ ವಿದ್ಯಾರ್ಥಿಯ ಮೇಲೆ ಗುಂಡು ಹಾರಿಸಿದ್ದಾನೆ. ದಾಳಿಯಲ್ಲಿ ವಿದ್ಯಾರ್ಥಿಯ ತಲೆಗೆ ಗಾಯವಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬ ಗುರುವಾರ ಹೋಲಿ ಫ್ಯಾಮಿಲಿ ಆಸ್ಪತ್ರೆ ಆವರಣದಲ್ಲಿ ಮತ್ತೊಬ್ಬ ವಿದ್ಯಾರ್ಥಿಯ ಮೇಲೆ ಗುಂಡು ಹಾರಿಸಿದ್ದಾನೆ. ದಾಳಿಯಲ್ಲಿ ವಿದ್ಯಾರ್ಥಿಯ ತಲೆಗೆ ಗಾಯವಾಗಿದೆ.

ದೆಹಲಿ ಪೊಲೀಸರ ಪ್ರಕಾರ, ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಲೈಬ್ರರಿಯಲ್ಲಿ ಜಗಳ ನಡೆದಿರುವ ಕುರಿತು ಜಾಮಿಯಾ ನಗರ ಪೊಲೀಸ್ ಠಾಣೆಗೆ ಗುರುವಾರ ರಾತ್ರಿ 9 ಗಂಟೆ ಸುಮಾರಿಗೆ ಪಿಸಿಆರ್ ಕರೆ ಬಂದಿದೆ.

ವಿಚಾರಣೆ ನಡೆಸಿದಾಗ, ಎರಡು ಗುಂಪಿನ ವಿದ್ಯಾರ್ಥಿಗಳ ನಡುವೆ ಜಗಳ ನಡೆದಿರುವುದು ತಿಳಿದುಬಂದಿದೆ. ಘಟನೆಯಲ್ಲಿ ಮೀರತ್‌ನ ಸರ್ದಹಾನ್ ಗ್ರಾಮದ ನಿವಾಸಿ ನೊಮನ್ ಚೌಧರಿ (26) ಎಂಬ ಕಾನೂನು ವಿದ್ಯಾರ್ಥಿಯ ತಲೆಗೆ ಗಾಯವಾಗಿದೆ. ಆತನನ್ನು ಚಿಕಿತ್ಸೆಗಾಗಿ ಹೋಲಿ ಫ್ಯಾಮಿಲಿ ಆಸ್ಪತ್ರೆಗೆ ರವಾನಿಸಲಾಗಿದೆ.

ನೊಮನ್ ಚೌಧರಿಯ ಸ್ನೇಹಿತನಾಗಿದ್ದ ಮತ್ತೊಬ್ಬ ವಿದ್ಯಾರ್ಥಿ ನೊಮನ್ ಅಲಿ ಕೂಡ ತನ್ನ ಸ್ನೇಹಿತನನ್ನು ನೋಡಲು ಆಸ್ಪತ್ರೆಗೆ ಭೇಟಿ ನೀಡಿದ್ದಾನೆ. ಈ ಮಧ್ಯೆ, ಹರಿಯಾಣದ ಮೇವತ್‌ನ ನಿವಾಸಿ ಜಲಾಲ್ ಎಂಬ ಎರಡನೇ ಗುಂಪಿನ ವಿದ್ಯಾರ್ಥಿ ತನ್ನ ಸ್ನೇಹಿತರೊಂದಿಗೆ ಆಸ್ಪತ್ರೆಗೆ ಬಂದು ಆಸ್ಪತ್ರೆ ಆವರಣದಲ್ಲಿರುವ ಎಮರ್ಜೆನ್ಸಿ ವಾರ್ಡ್‌ನ ಹೊರಗೆ ನೊಮನ್ ಅಲಿ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ನೊಮನ್ ಅಲಿ ನೆತ್ತಿಯ ಮೇಲೆ ಗಾಯವಾಗಿದ್ದು, ಆತನನ್ನು ಏಮ್ಸ್ ಟ್ರಾಮಾ ಸೆಂಟರ್‌ಗೆ ಸ್ಥಳಾಂತರಿಸಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com