ಪಾಟ್ನಾದಲ್ಲಿ ಮರಳು ಗಣಿಗಾರಿಕೆ ವಿಚಾರವಾಗಿ ಎರಡು ಗುಂಪುಗಳ ಘರ್ಷಣೆ: ನಾಲ್ವರ ಸಾವು
ಪಾಟ್ನಾದ ಬಿಹ್ತಾ ಪ್ರದೇಶದಲ್ಲಿ ಕಳೆದ ರಾತ್ರಿ ಎರಡು ಗುಂಪುಗಳ ನಡುವೆ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
Published: 30th September 2022 12:31 AM | Last Updated: 30th September 2022 12:35 AM | A+A A-

ಸಂಗ್ರಹ ಚಿತ್ರ
ಪಾಟ್ನಾ: ಪಾಟ್ನಾದ ಬಿಹ್ತಾ ಪ್ರದೇಶದಲ್ಲಿ ಕಳೆದ ರಾತ್ರಿ ಎರಡು ಗುಂಪುಗಳ ನಡುವೆ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಬಿಹ್ತಾ ಪೊಲೀಸ್ ಠಾಣಾ ವ್ಯಾಪ್ತಿಯ ಅಮೀನಾಬಾದ್ ಗ್ರಾಮದ ಸೋನೆ ನದಿ ದಂಡೆಯಲ್ಲಿ ಮರಳು ಗಣಿಗಾರಿಕೆ ವಿಚಾರವಾಗಿ ಘರ್ಷಣೆ ನಡೆದಿದೆ. ನಿರ್ಮಾಣ ಉದ್ದೇಶಗಳಿಗಾಗಿ ಸೋನೆ ನದಿಯ ಮರಳನ್ನು ಉತ್ತಮ ಗುಣಮಟ್ಟವೆಂದು ಪರಿಗಣಿಸಲಾಗಿದೆ. ಆದ್ದರಿಂದ, ಬಿಹಾರ ಮತ್ತು ಪೂರ್ವ ಉತ್ತರ ಪ್ರದೇಶದಲ್ಲಿ ದೊಡ್ಡ ಬೇಡಿಕೆಯಿಂದಾಗಿ ಅದರ ಬೆಲೆ ಹೆಚ್ಚಾಗಿರುತ್ತದೆ.
ಕಳೆದ ರಾತ್ರಿ 11.30ರ ಸುಮಾರಿಗೆ ಫೌಜಿ ಗುಂಪು ಮತ್ತು ಸಿಪಾಹಿ ಗುಂಪಿನ ನಡುವೆ ಘರ್ಷಣೆ ಆರಂಭವಾಯಿತು. ನಿರ್ದಿಷ್ಟ ಸ್ಥಳದಲ್ಲಿ ಮರಳು ಗಣಿಗಾರಿಕೆ ಕುರಿತು ಎರಡೂ ಕಡೆಯವರು ಪರಸ್ಪರ ಮಾತಿನ ಚಕಮಕಿಯಲ್ಲಿ ತೊಡಗಿದ್ದರು. ನಂತರ ಅದು ಹಿಂಸಾಚಾರಕ್ಕೆ ತಿರುಗಿತು. ಪರಸ್ಪರ ಗುಂಡು ಹಾರಿಸತೊಡಗಿದರು. ಈ ಗುಂಡಿನ ದಾಳಿಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ರಾತ್ರಿಯಿಡೀ ಎರಡು ಗುಂಪುಗಳ ನಡುವೆ ಗುಂಡಿನ ಚಕಮಕಿ ಮುಂದುವರಿದಿದ್ದು, ಸ್ಥಳೀಯ ಪೊಲೀಸರು ಅಲ್ಲಿಗೆ ಹೋಗಿ ಶಾಂತಿ ಸ್ಥಾಪಿಸಲು ಧೈರ್ಯ ಮಾಡಲಿಲ್ಲ. ಘರ್ಷಣೆ ನಂತರ ಮೃತದೇಹಗಳನ್ನೂ ತಮ್ಮೊಂದಿಗೆ ತೆಗೆದುಕೊಂಡು ಹೋಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.