ಕಾಂಜಾವಾಲ ಹಿಟ್ ಅಂಡ್ ಡ್ರ್ಯಾಗ್ ಪ್ರಕರಣ: ಚಾರ್ಜ್ ಶೀಟ್ ಸಲ್ಲಿಸಿದ ಪೊಲೀಸರು, ನಾಲ್ವರ ವಿರುದ್ಧ ಕೊಲೆ ಆರೋಪ
ಮೂರು ತಿಂಗಳ ತನಿಖೆಯ ನಂತರ ದೆಹಲಿ ಪೊಲೀಸರು ಅಂತಿಮವಾಗಿ 2023ರ ಮೊದಲ ದಿನವೇ 20 ವರ್ಷದ ಯುವತಿಯನ್ನು ಬಲಿ ಪಡೆದ ಕಾಂಜಾವಾಲ ಹಿಟ್ ಅಂಡ್ ಡ್ರ್ಯಾಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಸುಮಾರು 800...
Published: 01st April 2023 03:30 PM | Last Updated: 01st April 2023 05:54 PM | A+A A-

ಆರೋಪಿಗಳ ಕಾರು
ನವದೆಹಲಿ: ಮೂರು ತಿಂಗಳ ತನಿಖೆಯ ನಂತರ ದೆಹಲಿ ಪೊಲೀಸರು ಅಂತಿಮವಾಗಿ 2023ರ ಮೊದಲ ದಿನವೇ 20 ವರ್ಷದ ಯುವತಿಯನ್ನು ಬಲಿ ಪಡೆದ ಕಾಂಜಾವಾಲ ಹಿಟ್ ಅಂಡ್ ಡ್ರ್ಯಾಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಸುಮಾರು 800 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.
ದೆಹಲಿ ಹಿರಿಯ ಪೊಲೀಸ್ ಅಧಿಕಾರಿಯ ಪ್ರಕಾರ, ರೋಹಿಣಿ ನ್ಯಾಯಾಲಯದಲ್ಲಿ ಇಂದು ಸಲ್ಲಿಸಲಾದ ಆರೋಪಪಟ್ಟಿಯಲ್ಲಿ ಸುಮಾರು 120 ಸಾಕ್ಷ್ಯಗಳಿವೆ.
ಹೊಸ ವರ್ಷದ ದಿನದಂದು ದೆಹಲಿಯ ಕಾಂಜಾವಾಲದಲ್ಲಿ ನಡೆದಿದ್ದ ಭೀಕರ ಅಪಘಾತದಲ್ಲಿ ಕಾರಿನಡಿ ಸಿಲುಕಿದ್ದ 20 ವರ್ಷದ ಯುವತಿಯನ್ನು ಎಳೆದೊಯ್ದು ಹತ್ಯೆಗೈದ ನಾಲ್ವರು ಆರೋಪಿಗಳ ವಿರುದ್ಧ ಪೊಲೀಸರು ಕೊಲೆ ಆರೋಪ ದಾಖಲಿಸಿದ್ದಾರೆ.
ಇದನ್ನು ಓದಿ: ಕಾಂಜಾವಾಲ ಪ್ರಕರಣ: ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ದಾಖಲು
ಒಟ್ಟು 7 ಆರೋಪಿಗಳ ಪೈಕಿ ನಾಲ್ವರು ಆರೋಪಿಗಳಾದ ಅಮಿತ್, ಕ್ರಿಶನ್, ಮಿಥುನ್ ಮತ್ತು ಮನೋಜ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಇತರ ಸಂಬಂಧಿತ ಸೆಕ್ಷನ್‌ಗಳ ಜೊತೆಗೆ ಕೊಲೆ ಆರೋಪವನ್ನು ಹೊರಿಸಿದ್ದಾರೆ. ಇತರ ಮೂವರು ಆರೋಪಿಗಳಾದ ದೀಪಕ್, ಅಂಕುಶ್ ಮತ್ತು ಅಶುತೋಷ್ ವಿರುದ್ಧ ಕ್ರಿಮಿನಲ್ ಪಿತೂರಿ ಹಾಗೂ ಸಾಕ್ಷ್ಯಾಧಾರಗಳನ್ನು ನಾಶಪಡಿಸಿದ ಪ್ರಕರಣ ದಾಖಲಿಸಲಾಗಿದೆ.
ಕಾಂಜಾವಾಲ ಅಪಘಾತ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಡಿಸೆಂಬರ್ 31ರ ರಾತ್ರಿ ಸುಲ್ತಾನಪುರಿಯಲ್ಲಿ ಸಂಭವಿಸಿದ ಭಯಾನಕ ರಸ್ತೆ ಅಪಘಾತದಲ್ಲಿ ಅಂಜಲಿ ಸಿಂಗ್ ಎಂಬ ಯುವತಿ ಸಾವನ್ನಪ್ಪಿದ್ದರು.