ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಹೊಸ ದತ್ತಾಂಶ ಸಂರಕ್ಷಣಾ ಮಸೂದೆ ಮಂಡನೆ: ಸುಪ್ರೀಂ ಕೋರ್ಟ್‌ಗೆ ಕೇಂದ್ರ

ಹೊಸ ದತ್ತಾಂಶ ಸಂರಕ್ಷಣಾ ಮಸೂದೆ ಸಿದ್ಧವಾಗಿದೆ ಮತ್ತು ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಅದನ್ನು ಮಂಡಿಸಲಾಗುವುದು ಎಂದು ಕೇಂದ್ರ ಸರ್ಕಾರ ಮಂಗಳವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಹೊಸ ದತ್ತಾಂಶ ಸಂರಕ್ಷಣಾ ಮಸೂದೆ ಸಿದ್ಧವಾಗಿದೆ ಮತ್ತು ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಅದನ್ನು ಮಂಡಿಸಲಾಗುವುದು ಎಂದು ಕೇಂದ್ರ ಸರ್ಕಾರ ಮಂಗಳವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಮಸೂದೆ ಸಿದ್ಧವಾಗಿದೆ ಎಂದು ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ನೇತೃತ್ವದ ಸಂವಿಧಾನ ಪೀಠಕ್ಕೆ ಅಟಾರ್ನಿ ಜನರಲ್ ಆರ್. ವೆಂಕಟ್ರಮಣಿ ತಿಳಿಸಿದರು.

ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ, ಅನಿರುದ್ಧ ಬೋಸ್, ಹೃಷಿಕೇಶ್ ರಾಯ್ ಮತ್ತು ಸಿಟಿ ರವಿಕುಮಾರ್ ಅವರನ್ನೊಳಗೊಂಡ ಪೀಠವು ಈ ವಿಚಾರವನ್ನು ಆಲಿಸಿತು.

ನ್ಯಾಯಮೂರ್ತಿ ಜೋಸೆಫ್ ಅವರು ಜೂನ್ 16ರಂದು ನಿವೃತ್ತರಾಗಲಿರುವ ಕಾರಣ ಹೊಸ ಪೀಠವನ್ನು ರಚಿಸುವಂತೆ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರ ಮುಂದೆ ಈ ವಿಷಯವನ್ನು ಇರಿಸುವಂತೆ ಅವರು ನಿರ್ದೇಶನ ನೀಡಿದರು. 
ಈ ಕುರಿತು 2023ರ ಆಗಸ್ಟ್ ಮೊದಲ ವಾರದಲ್ಲಿ ವಿಚಾರಣೆಗೆ ಮುಂದೂಡಲಾಗಿದೆ.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಶ್ಯಾಮ್ ದಿವಾನ್ ಅವರು, ಶಾಸಕಾಂಗ ಪ್ರಕ್ರಿಯೆಗೆ ನ್ಯಾಯಾಲಯದ ವಿಚಾರಣೆಯನ್ನು ನ್ಯಾಯಾಲಯ ಜೋಡಿಸಬಾರದು. ಶಾಸಕಾಂಗ ಪ್ರಕ್ರಿಯೆಯು ಸಂಕೀರ್ಣವಾಗಿದೆ ಮತ್ತು ಅದನ್ನು ಮತ್ತೆ ಕೆಲವು ಸಮಿತಿಗಳಿಗೆ ಉಲ್ಲೇಖಿಸಬಹುದು ಎಂದು ಅವರು ಹೇಳಿದರು.

ಬಳಕೆದಾರರ ದತ್ತಾಂಶವನ್ನು ಫೇಸ್‌ಬುಕ್‌ ಹಾಗೂ ಇತರರೊಂದಿಗೆ ಹಂಚಿಕೊಳ್ಳುವ ಕುರಿತ ವಾಟ್ಸ್‌ಆ್ಯಪ್‌ ನೀತಿಯನ್ನು ವಿದ್ಯಾರ್ಥಿಗಳಾದ ಕರ್ಮಣ್ಯ ಸಿಂಗ್‌ ಸರೀನ್‌ ಮತ್ತು ಶ್ರೇಯಾ ಸೇಥಿ ಎಂಬುವರು ಪ್ರಶ್ನಿಸಿದ್ದರು. ಈ ನೀತಿಯು ತಮ್ಮ ಖಾಸಗಿತನ ಹಾಗೂ ಮುಕ್ತ ಸ್ವಾತಂತ್ರ್ಯದ ಹಕ್ಕನ್ನು ಉಲ್ಲಂಘಿಸಲಿದೆ ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ದೂರಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com