ಡೋಕ್ಲಾಮ್ ಪ್ರಸ್ಥಭೂಮಿಯ ಬಳಿ ಚೀನಾ ಕಟ್ಟಡ ನಿರ್ಮಾಣ, ಭದ್ರತೆಗೆ ಅಪಾಯಕಾರಿ: ಕಾಂಗ್ರೆಸ್
ಡೊಕ್ಲಾಮ್ ಪ್ರಸ್ಥಭೂಮಿಯ ಬಳಿ ಚೀನಾ ಕಟ್ಟಡ ನಿರ್ಮಿಸಿರುವ ಬಗ್ಗೆ ವಿಪಕ್ಷ ಕಾಂಗ್ರೆಸ್ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಈ ಬೆಳವಣಿಗೆ ದೇಶದ ಭದ್ರತೆಗೆ ಅಪಾಯಕಾರಿಯಾಗಿದೆ. ಪ್ರಧಾನಿ ಈ ಬಗ್ಗೆ ಮೌನ ಮುರಿಯಬೇಕು ಎಂದು ಹೇಳಿದೆ.
Published: 12th April 2023 08:15 PM | Last Updated: 12th April 2023 08:22 PM | A+A A-

ಚೀನಾ (ಸಂಗ್ರಹ ಚಿತ್ರ)
ನವದೆಹಲಿ: ಡೊಕ್ಲಾಮ್ ಪ್ರಸ್ಥಭೂಮಿಯ ಬಳಿ ಚೀನಾ ಕಟ್ಟಡ ನಿರ್ಮಿಸಿರುವ ಬಗ್ಗೆ ವಿಪಕ್ಷ ಕಾಂಗ್ರೆಸ್ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಈ ಬೆಳವಣಿಗೆ ದೇಶದ ಭದ್ರತೆಗೆ ಅಪಾಯಕಾರಿಯಾಗಿದೆ. ಪ್ರಧಾನಿ ಈ ಬಗ್ಗೆ ಮೌನ ಮುರಿಯಬೇಕು ಎಂದು ಹೇಳಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದು, 3 ವರ್ಷಗಳಲ್ಲಿ ಎಲ್ಎಸಿಯಲ್ಲಿನ ಹಿಂದಿನ ಸ್ಥಿತಿಯನ್ನು ಸ್ಥಾಪಿಸುವುದಕ್ಕೆ ಪ್ರಧಾನಿ ಮೋದಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ ಹಾಗೂ ದಾರಿ ತಪ್ಪಿಸುವ ಹೇಳಿಕೆ ನೀಡುವ ಬದಲು ಕೇಂದ್ರ ಗೃಹ ಸಚಿವರು ಹಿಂದಿನ ಸ್ಥಿತಿಯನ್ನು ಸ್ಥಾಪಿಸುವಂತೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಅರುಣಾಚಲ ಪ್ರದೇಶಕ್ಕೆ ಅಮಿತ್ ಶಾ ಭೇಟಿ: ಚೀನಾ ಆಕ್ಷೇಪ
"ಭಾರತೀಯ ಸೇನೆ ಸಹ ಡೊಕ್ಲಾಮ್ ಪ್ರಸ್ಥಭೂಮಿಯಲ್ಲಿ ಚೀನಾ ನಿರ್ಮಾಣ ಚಟುವಟಿಕೆಗಳಲ್ಲಿ ತೊಡಗಿರುವುದರ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದೆ. ಈ ವಿಷಯಗಳ ಬಗ್ಗೆ ಸಂಸತ್ ನಲ್ಲಿ ನಡೆಯಬೇಕಿದ್ದ ಚರ್ಚೆಗೂ 3 ವರ್ಷಗಳಿಂದ ಅವಕಾಶ ನೀಡಲಾಗುತ್ತಿಲ್ಲ ಎಂದು ಜೈರಾಮ್ ರಮೇಶ್ ಟ್ವೀಟ್ ನಲ್ಲಿ ಆರೋಪಿಸಿದ್ದಾರೆ.
ಭಾರತೀಯ ಸೇನೆ ಈ ಬೆಳವಣಿಗೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ವರದಿಗಳನ್ನು ಜೈರಾಮ್ ರಮೇಶ್ ತಮ್ಮ ಹೇಳಿಕೆಗಳಿಗೆ ಪೂರಕವಾಗಿ ಉಲ್ಲೇಖಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳೂ ಭಾರತದ ರಾಷ್ಟ್ರೀಯ ಭದ್ರತೆಗೆ ಅಪಾಯವೊಡ್ಡುತ್ತಿದೆ ಎಂಬುದನ್ನು ಸ್ಪಷ್ಟವಾಗಿ ತೋರುತ್ತದೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
ಇದನ್ನೂ ಓದಿ: ಅರುಣಾಚಲದ ಸ್ಥಳಗಳ ಮರುನಾಮಕರಣಕ್ಕೆ ಭಾರತ ವಿರೋಧ; ನಮ್ಮ 'ಸಾರ್ವಭೌಮತ್ವ' ಎಂದ ಚೀನಾ
"ಭಾರತದ ಭೂಮಿಯ ಒಂದೇ ಒಂದು ಇಂಚು ಭೂಮಿಯನ್ನೂ ಆಕ್ರಮಿಸಿಕೊಳ್ಳಲು ಯಾರನ್ನೂ ಬಿಡುವುದಿಲ್ಲ" ಎಂದು ಮಾ.09 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದರು. ಆದರೂ ವಾಸ್ತವ ಏನೆಂದರೆ, ಮೇ 2020 ರ ನಂತರ ಚೀನಾ ನಮ್ಮ ಸೈನಿಕರನ್ನು 2,000 ಚದರ ಕಿಲೋಮೀಟರ್ ಭಾರತೀಯ ಭೂಪ್ರದೇಶವನ್ನು ಪ್ರವೇಶಿಸುವುದನ್ನು ತಡೆದಿದೆ. ಇವತ್ತಿನ ದಿನಕ್ಕೂ ಚೀನಾ ಗಸ್ತು ಸಿಬ್ಬಂದಿಗಳು ಡೆಪ್ಸಾಂಗ್, ಡೆಮ್ಚೋಕ್, ಹಾಟ್ ಸ್ಪ್ರಿಂಗ್ಸ್ (ಕುಂಗ್ರಾಂಗ್ ನಲ್ಲಾ) ಮತ್ತು ಗೋಗ್ರಾ ಪೋಸ್ಟ್‌ನಲ್ಲಿನ ಹಲವಾರು ಗಸ್ತು ಕೇಂದ್ರಗಳಿಗೆ ನಮ್ಮ ಪ್ರವೇಶವನ್ನು ನಿರ್ಬಂಧಿಸುತ್ತವೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.