ವಂದೇ ಭಾರತ್ ರೈಲು ರಾಜಸ್ತಾನಕ್ಕೆ ಸಿಕ್ಕ ದೊಡ್ಡ ಉಡುಗೊರೆ: ಸಿಎಂ ಅಶೋಕ್ ಗೆಹ್ಲೋಟ್
ಅಜ್ಮೀರ್ ಮತ್ತು ದೆಹಲಿ ಕಂಟೋನ್ಮೆಂಟ್ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚರಿಸುವುದು ರಾಜಸ್ಥಾನಕ್ಕೆ 'ದೊಡ್ಡ ಕೊಡುಗೆ'. ಇಲ್ಲಿ ರೈಲು ಸೌಲಭ್ಯಗಳನ್ನು ಹೆಚ್ಚಿಸಿದರೆ ರಾಜ್ಯವು ದೇಶದ ಆರ್ಥಿಕ ನಾಯಕನಾಗಲಿದೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.
Published: 12th April 2023 05:08 PM | Last Updated: 12th April 2023 05:09 PM | A+A A-

ಸಿಪಿ ಜೋಶಿ, ಅಶೋಕ್ ಗೆಹ್ಲೋಟ್
ಜೈಪುರ: ಅಜ್ಮೀರ್ ಮತ್ತು ದೆಹಲಿ ಕಂಟೋನ್ಮೆಂಟ್ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚರಿಸುವುದು ರಾಜಸ್ಥಾನಕ್ಕೆ 'ದೊಡ್ಡ ಕೊಡುಗೆ'. ಇಲ್ಲಿ ರೈಲು ಸೌಲಭ್ಯಗಳನ್ನು ಹೆಚ್ಚಿಸಿದರೆ ರಾಜ್ಯವು ದೇಶದ ಆರ್ಥಿಕ ನಾಯಕನಾಗಲಿದೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.
ರಾಜ್ಯದ ಮೊದಲ ವಂದೇ ಭಾರತ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ ನಂತರ ಜೈಪುರ ರೈಲು ನಿಲ್ದಾಣದಲ್ಲಿ ಮಾತನಾಡಿದ ಗೆಹ್ಲೋಟ್, ಭೌಗೋಳಿಕವಾಗಿ ಪ್ರತ್ಯೇಕವಾದ ಗುರುತು ಹೊಂದಿರುವ ರಾಜಸ್ಥಾನದಲ್ಲಿ ರೈಲ್ವೇಗಳ ಅಭಿವೃದ್ಧಿಯ ಅವಶ್ಯಕತೆಯಿದೆ. ಇನ್ನು ರಾಜಸ್ಥಾನದಲ್ಲಿ ಕ್ಷಿಪ್ರ ಕೈಗಾರಿಕಾ ಅಭಿವೃದ್ಧಿ ನಡೆದಿದ್ದು ಈ ಕಾರಣಕ್ಕಾಗಿ ಇಲ್ಲಿ ರೈಲು ಸೌಕರ್ಯ ಹೆಚ್ಚಿಸಿದರೆ ಆರ್ಥಿಕತೆಯ ದೃಷ್ಟಿಯಿಂದ ದೇಶದಲ್ಲೇ ರಾಜ್ಯ ಮುಂಚೂಣಿಯಲ್ಲಿ ನಿಲ್ಲಲಿದೆ ಎಂದರು.
ದೇಶದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ರೈಲ್ವೆ ಪ್ರಮುಖ ಕೊಡುಗೆಯನ್ನು ಹೊಂದಿದೆ. ಸ್ವಾತಂತ್ರ್ಯದ ನಂತರ ರೈಲ್ವೆಯಲ್ಲಿ ತಂದ ಬದಲಾವಣೆಗಳು ನಮ್ಮ ಮಹಾನ್ ನಾಯಕರ ಚಿಂತನೆ, ಸಮರ್ಪಿತ ರೈಲ್ವೆ ನೌಕರರು ಮತ್ತು ಅಧಿಕಾರಿಗಳ ಕಠಿಣ ಪರಿಶ್ರಮದ ಪ್ರತಿಫಲವಾಗಿದೆ. ಪ್ರಯಾಣಿಕರು ಮತ್ತು ಸರಕು ಸಾಗಣೆಯೊಂದಿಗೆ, ದೇಶದಲ್ಲಿ ನೈಸರ್ಗಿಕ ವಿಪತ್ತು ಮತ್ತು ಯುದ್ಧದ ಸಮಯದಲ್ಲಿ ರೈಲ್ವೇ ತನ್ನ ಪ್ರಮುಖ ಸೇವೆಗಳನ್ನು ಸಲ್ಲಿಸಿದೆ ಎಂದು ಗೆಹ್ಲೋಟ್ ಹೇಳಿದರು.
ಇದನ್ನೂ ಓದಿ: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ಸಮಾರಂಭ; ರಾಜಸ್ಥಾನದ ಸಿಎಂ ಅಶೋಕ್ ಗೆಹ್ಲೋಟ್‌ರನ್ನು ಹೊಗಳಿದ ಪ್ರಧಾನಿ
ಇದು ರಾಜಸ್ಥಾನದ ಮೊದಲ ಸೆಮಿ-ಹೈ-ಸ್ಪೀಡ್ ರೈಲಾಗಿದ್ದು ಇದು ಜೈಪುರ ಮತ್ತು ದೆಹಲಿ ನಡುವಿನ ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ. ಹೊಸ ವಂದೇ ಭಾರತ್ ರೈಲಿನ ನಿಯಮಿತ ಸೇವೆಯು ಏಪ್ರಿಲ್ 13ರಿಂದ ಪ್ರಾರಂಭವಾಗಲಿದೆ. ಜೈಪುರ, ಅಲ್ವಾರ್ ಮತ್ತು ಗುರ್ಗುಗ್ರಾಮ್‌ನಲ್ಲಿ ನಿಲುಗಡೆಗಳೊಂದಿಗೆ ಅಜ್ಮೀರ್ ಮತ್ತು ದೆಹಲಿ ಕಂಟೋನ್ಮೆಂಟ್ ನಡುವೆ ಕಾರ್ಯನಿರ್ವಹಿಸುತ್ತದೆ ಎಂದರು.
ಬನ್ಸ್ವಾರಾ, ಟೋಂಕ್, ಕರೌಲಿಯ ಪ್ರಧಾನ ಕಛೇರಿಯನ್ನು ರೈಲ್ವೆಯೊಂದಿಗೆ ಸಂಪರ್ಕಿಸುವಂತೆ ಗೆಹ್ಲೋಟ್ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಒತ್ತಾಯಿಸಿದರು. ಬನ್ಸ್ವಾರಾದಲ್ಲಿ ರೈಲು ಮಾರ್ಗದ ಶಂಕುಸ್ಥಾಪನೆ ನಡೆದಿದ್ದು, ಸಾರ್ವಜನಿಕ ಹಿತಾಸಕ್ತಿಯ ಈ ಕಾಮಗಾರಿ ಮುಂದೆ ಸಾಗಲಿಲ್ಲ ಎಂದರು. ಈ ಯೋಜನೆಗೆ ರೈಲ್ವೇ ಆದ್ಯತೆ ನೀಡಬೇಕೆಂದು ಗೆಹ್ಲೋಟ್ ಒತ್ತಾಯಿಸಿದರು.