ಸಚಿನ್ ಪೈಲಟ್- ಗೆಹ್ಲೋಟ್ ನಡುವೆ ಕಮಲ್ ನಾಥ್ ಸಂಧಾನ?
ರಾಜಸ್ಥಾನದಲ್ಲಿ ಪಂಜಾಬ್ ಮಾದರಿಯ ಹಿನ್ನಡೆಯನ್ನು ತಡೆಗಟ್ಟಲು ಸಚಿನ್ ಪೈಲಟ್ ಹಾಗೂ ಕಾಂಗ್ರೆಸ್ ನಾಯಕರ ನಡುವೆ ಮಧ್ಯಪ್ರದೇಶದ ಮಾಜಿ ಸಿಎಂ ಕಮಲ್ ನಾಥ್ ಸಂಧಾನ ನಡೆಸುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.
Published: 14th April 2023 03:08 AM | Last Updated: 14th April 2023 03:11 AM | A+A A-

ಕಮಲ್ ನಾಥ್-ಸಚಿನ್ ಪೈಲಟ್
ನವದೆಹಲಿ: ರಾಜಸ್ಥಾನದಲ್ಲಿ ಪಂಜಾಬ್ ಮಾದರಿಯ ಹಿನ್ನಡೆಯನ್ನು ತಡೆಗಟ್ಟಲು ಸಚಿನ್ ಪೈಲಟ್ ಹಾಗೂ ಕಾಂಗ್ರೆಸ್ ನಾಯಕರ ನಡುವೆ ಮಧ್ಯಪ್ರದೇಶದ ಮಾಜಿ ಸಿಎಂ ಕಮಲ್ ನಾಥ್ ಸಂಧಾನ ನಡೆಸುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಎನ್ ಡಿಟಿವಿ ಈ ಬಗ್ಗೆ ವರದಿ ಪ್ರಕಟಿಸಿದ್ದು, ಕಮಲ್ ನಾಥ್ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಹಾಗೂ ಸಚಿನ್ ಪೈಲಟ್ ನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ ಹಾಗೂ ಎರಡೂ ಬಣಗಳ ನಡುವೆ ಇರುವ ಭಿನ್ನಾಭಿಪ್ರಾಯವನ್ನು ಹೋಗಲಾಡಿಸುವ ಬಗ್ಗೆ ಮಾತನಾಡಿದ್ದಾರೆ.
ರಾಜಸ್ಥಾನದ ಹಿಂದಿನ ವಸುಂಧರಾ ರಾಜೇ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣಗಳಲ್ಲಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದ ಸಚಿನ್ ಪೈಲಟ್ ಕಾಂಗ್ರೆಸ್ ನ ಎಚ್ಚರಿಕೆಗೂ ಜಗ್ಗದೇ ತಮ್ಮದೇ ಕಾಂಗ್ರೆಸ್ ಸರ್ಕಾರದ ವಿರುದ್ಧ ಜೈಪುರದಲ್ಲಿ ನಿರಶನ ನಡೆಸಿದ್ದರು.
ಇದನ್ನೂ ಓದಿ: ಪೈಲಟ್ ವಿರುದ್ಧ ಶಿಸ್ತು ಕ್ರಮ; ರಾಜಸ್ಥಾನ ಕಾಂಗ್ರೆಸ್ ಉಸ್ತುವಾರಿ
ಆರಂಭದಲ್ಲಿ ಗೆಹ್ಲೋಟ್ ಅವರನ್ನು ಬೆಂಬಲಿಸಿ ಎರಡು ಹೇಳಿಕೆಗಳನ್ನು ನೀಡಿ, ಪೈಲಟ್ ಅವರ ಉಪವಾಸವನ್ನು "ಪಕ್ಷ ವಿರೋಧಿ ಚಟುವಟಿಕೆ" ಎಂದು ಕರೆದಿದ್ದ ಕಾಂಗ್ರೆಸ್ ನಾಯಕತ್ವ ಈಗ ತನ್ನ ನಿಲುವನ್ನು ಬದಲಿಸಿದೆ ಮತ್ತು ಮಧ್ಯಮ ಮಾರ್ಗವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿದೆ. ಪೈಲಟ್ ಅವರು ಕಮಲ್ ನಾಥ್ ಮತ್ತು ವೇಣುಗೋಪಾಲ್ ಅವರಿಗೆ ತಮ್ಮ ಆಕ್ಷೇಪಣೆಗಳನ್ನು ತಿಳಿಸಿದ್ದು ಪಕ್ಷ ನ್ಯಾಯಯುತವಾಗಿ ನಡೆಸಿಕೊಳ್ಳಬೇಕೆಂದು ಕೋರಿದರು ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಆಂತರಿಕ ಮಾಹಿತಿಯ ಪ್ರಕಾರ, ಪೈಲಟ್ ವಸುಂಧರಾ ರಾಜೆ ವಿರುದ್ಧ ತಮ್ಮ ನಿರಶನವನ್ನು ಸಮರ್ಥಿಸಿಕೊಂಡಿದ್ದು, ಅದು ಪಕ್ಷ ವಿರೋಧಿಯಲ್ಲ, ಇತರ ನಾಯಕರು ಪ್ರಧಾನಿ ನರೇಂದ್ರ ಮೋದಿ ಅಥವಾ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ವೈಫಲ್ಯಗಳ ಆರೋಪಗಳನ್ನು ಟೀಕಿಸಿದಾಗ ಪಕ್ಷ ದ್ವಿಮುಖ ನೀತಿ ಅನುಸರಿಸುತ್ತದೆ ಎಂದು ಅವರು ವಾದಿಸಿದರು. ಇದಕ್ಕೂ ಮುನ್ನ ಪೈಲಟ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ರಾಜಸ್ಥಾನ ಕಾಂಗ್ರೆಸ್ ಉಸ್ತುವಾರಿ ಹೇಳಿದ್ದರು.