ಬಿಹಾರದಲ್ಲಿ ಮತ್ತೊಂದು ಹೂಚ್ ದುರಂತ: ನಕಲಿ ಮದ್ಯ ಸೇವಿಸಿ 20 ಮಂದಿ ಸಾವು

ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ ನಕಲಿ ಮದ್ಯ ಸೇವಿಸಿ ಕನಿಷ್ಠ 20 ಮಂದಿ ಸಾವನ್ನಪ್ಪಿದ್ದು, ಹಲವರು ಅಸ್ವಸ್ಥಗೊಂಡಿದ್ದಾರೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಪಾಟ್ನಾ: ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ ನಕಲಿ ಮದ್ಯ ಸೇವಿಸಿ ಕನಿಷ್ಠ 20 ಮಂದಿ ಸಾವನ್ನಪ್ಪಿದ್ದು, ಹಲವರು ಅಸ್ವಸ್ಥಗೊಂಡಿದ್ದಾರೆ. 

ಲಕ್ಷ್ಮಿಪುರ, ಪಹರ್‌ಪುರ ಮತ್ತು ಹರ್ಸಿದ್ಧಿ ಬ್ಲಾಕ್‌ಗಳಲ್ಲಿ ಈ ಸಾವುಗಳು ವರದಿಯಾಗಿದ್ದು, ಮೃತರು 19 ರಿಂದ 48ರ ವಯೋಮಾನದವರು ಎಂದು ಹೇಳಲಾಗಿದೆ.

ಏಪ್ರಿಲ್ 2016 ರಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಮದ್ಯ ಮಾರಾಟ ಮತ್ತು ಸೇವನೆ ಸಂಪೂರ್ಣ ನಿಷೇಧಿಸಿದ ನಂತರ ನಕಲಿ ಮದ್ಯದ ಹಾವಳಿ ಹೆಚ್ಚಾಗಿದೆ. ನಕಲಿ ಮದ್ಯ ಸೇವಿಸಿ ಹಲವರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. 

ತುರ್ಕೌಲಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಲಕ್ಷ್ಮಿಪುರ ಗ್ರಾಮದಲ್ಲಿ ಶುಕ್ರವಾರ ಮೊದಲ ಸಾವು ವರದಿಯಾಗಿದ್ದು, ತಂದೆ-ಮಗ ಇಬ್ಬರೂ ಮದ್ಯ ಸೇವಿಸಿ ಸಾವನ್ನಪ್ಪಿದ್ದಾರೆ. ಗುರುವಾರ ರಾತ್ರಿ ಗ್ರಾಮದ ಕೃಷಿ ಗದ್ದೆಯಲ್ಲಿ ಗೋಧಿ ಬೆಳೆ ಕಟಾವು ಮಾಡಿ ವಾಪಸು ಬಂದ ಕೂಡಲೇ ತಲೆನೋವು, ದೃಷ್ಟಿ ಹೀನತೆ, ವಾಂತಿ ಕಾಣಿಸಿಕೊಂಡಿದೆ. ತಕ್ಷಣ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ತಂದೆ ಮತ್ತು ಮಗ ಇಬ್ಬರೂ ಕೆಲಸ ಮುಗಿಸಿ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು ಎಂದು ಸಂಬಂಧಿಕರು ತಿಳಿಸಿದ್ದಾರೆ.

ಪಹರ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಮುಶಾಹರ್ ಟೋಲಿ ಮತ್ತು ಸುಗೌಲಿ ಪೊಲೀಸ್ ಠಾಣೆ ವ್ಯಾಪ್ತಿಯ ಗಿಘಾ ಗ್ರಾಮದಲ್ಲಿ ಇದೇ ರೀತಿಯ ಘಟನೆಗಳು ವರದಿಯಾಗಿವೆ. ಗುತಾನ್ ಮಾಂಝಿ ಮತ್ತು ತುಂಟನ್ ಸಿಂಗ್ ಮುಸಾಹರ್ ಟೋಲಿಯಲ್ಲಿ ಮೃತಪಟ್ಟರೆ, ಗಿಧಾ ನಿವಾಸಿಗಳಾದ ಸುದೇಶ್ ರಾಮ್, ಇಂದ್ರಶನ್ ಮಹ್ತೋ, ಚುಲಾಹಿ ಪಾಸ್ವಾನ್ ಮತ್ತು ಕೌವಾಹ ಗ್ರಾಮದ ಗೋವಿಂದ್ ಠಾಕೂರ್ ಅವರು ಛಟೌನಿಯ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಜಟಾ ರಾಮ್ ಅಲಿಯಾಸ್ ರಾಮೇಶ್ವರ್ ರಾಮ್ ಎಂಬಾತ ಗ್ರಾಮಕ್ಕೆ ನಕಲಿ ಮದ್ಯವನ್ನು ತಂದಿದ್ದನು ಮತ್ತು ಅದನ್ನು ಸ್ಥಳೀಯ ಇತರ ಪೂರೈಕೆದಾರರಿಗೆ ಸರಬರಾಜು ಮಾಡಲಾಗುತ್ತಿತ್ತು ಎಂದು ಸ್ಥಳೀಯರು ಹೇಳಿದ್ದಾರೆ. 

ಜಟಾ ಮತ್ತು ಧ್ರುವ ಪಾಸ್ವಾನ್ ಮೋತಿಹಾರಿ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಅಶೋಕ್ ಪಾಸ್ವಾನ್ ಮತ್ತು ಛೋಟು ಪಾಸ್ವಾನ್ ಮುಜಾಫರ್‌ಪುರದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಏತನ್ಮಧ್ಯೆ, ಅಬಕಾರಿ ಮತ್ತು ನಿಷೇಧ ನೀತಿ 2016 ರ ನಿಬಂಧನೆಗಳನ್ನು ಉಲ್ಲಂಘಿಸಿ ಅಕ್ರಮ ನಕಲಿ ಮದ್ಯ ಪೂರೈಕೆಯಲ್ಲಿ ತೊಡಗಿದ್ದಕ್ಕಾಗಿ ಪೂರ್ವ ಚಂಪಾರಣ್ ಜಿಲ್ಲೆಯಿಂದ ಏಳು ಜನರನ್ನು ಬಂಧಿಸಲಾಗಿದೆ ಎಂದು ಚಂಪಾರಣ್ ರೇಂಜ್ ಡಿಐಜಿ ಜಯಂತ್ ಕಾಂತ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com