ಬಿಲ್ಕಿಸ್ ಪ್ರಕರಣ: ಸುಪ್ರೀಂ ಕೋರ್ಟ್ ಆದೇಶದ ಮರುಪರಿಶೀಲನೆಗೆ ಮನವಿ ಮಾಡಲು ಕೇಂದ್ರ, ಗುಜರಾತ್ ಸರ್ಕಾರಗಳ ಚಿಂತನೆ
ಬಿಲ್ಕಿಸ್ ಬಾನೊ ಪ್ರಕರಣದಲ್ಲಿ ಅಪರಾಧಿಗಳನ್ನು ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಾ.27 ರಂದು ನೀಡಿದ್ದ ಆದೇಶದ ಮರುಪರಿಶೀಲನೆಗೆ ಗುಜರಾತ್, ಕೇಂದ್ರ ಸರ್ಕಾರಗಳು ಚಿಂತನೆ ನಡೆಸಿವೆ.
Published: 18th April 2023 05:54 PM | Last Updated: 18th April 2023 07:19 PM | A+A A-

ಬಿಲ್ಕಿಸ್ ಬಾನೊ
ನವದೆಹಲಿ: ಬಿಲ್ಕಿಸ್ ಬಾನೊ ಪ್ರಕರಣದಲ್ಲಿ ಅಪರಾಧಿಗಳಾಗಿದ್ದ 11 ಮಂದಿಯನ್ನು ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಾ.27 ರಂದು ನೀಡಿದ್ದ ಆದೇಶದ ಮರುಪರಿಶೀಲನೆಗೆ ಗುಜರಾತ್, ಕೇಂದ್ರ ಸರ್ಕಾರಗಳು ಚಿಂತನೆ ನಡೆಸಿವೆ.
ಈ ಸಂಬಂಧ ಏ.19 ರಂದು ಗುಜರಾತ್ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಹೇಳಿಕೆ ನೀಡಿದ್ದು, ಸನ್ನಡತೆ ಅಧಾರದಲ್ಲಿ ಬಿಡುಗಡೆ ಮಾಡಿದ್ದಕ್ಕೆ ಸಂಬಂಧಿಸಿದ ಮೂಲ ಕಡತಗಳನ್ನು ಸಿದ್ಧವಾಗಿಟ್ಟುಕೊಂಡಿರುವಂತೆ ಸರ್ಕಾರಗಳಿಗೆ ಆದೇಶ ನೀಡಿತ್ತು.
ಅಪರಾಧಿಗಳನ್ನು ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡಿರುವುದನ್ನು ನ್ಯಾ.ಕೆಎಂ ಜೋಸೆಫ್ ಹಾಗೂ ನ್ಯಾ. ಬಿವಿ ನಾಗರತ್ನ ಅವರಿದ್ದ ಪೀಠ ಪ್ರಶ್ನೆ ಮಾಡಿದ್ದು, ಅಪರಾಧದ ಗಂಭೀರತೆಯನ್ನು ಸರ್ಕಾರ ಪರಿಗಣಿಸಬೇಕಿತ್ತು ಎಂದು ಹೇಳಿತ್ತು.
ಇದನ್ನೂ ಓದಿ: ಅಪರಾಧಿಗಳಿಗೆ ಕ್ಷಮಾಪಣೆ: ಕಡತಗಳೊಂದಿಗೆ ಸಿದ್ಧರಾಗಿರಿ'; ಬಿಲ್ಕಿಸ್ ಬಾನೊ ಅರ್ಜಿ ಕುರಿತು ಗುಜರಾತ್ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತಾಕೀತು!
ಸನ್ನಡತೆ ಆಧಾರದಲ್ಲಿ ಅಪರಾಧಿಗಳನ್ನು ಬಿಡುಗಡೆ ಮಾಡಲ್ಪು ಸರ್ಕಾರ ಬುದ್ಧಿ ಉಪಯೋಗಿಸಿದೆಯೇ? ಹಾಗೂ ಅದರ ನಿರ್ಧಾರಕ್ಕೆ ಯಾವ ಅಂಶ ಆಧಾರವಾಗಿದೆ ಎಂಬುದು ಪ್ರಶ್ನೆಯಾಗಿದೆ ಎಂದು ಕೋರ್ಟ್ ಹೇಳಿದ್ದು, 'ಇಂದು ಬಿಲ್ಕಿಸ್. ನಾಳೆ ಯಾರೇ ಆಗಬಹುದು. ಅದು ನೀವಾಗಿರಬಹುದು ಅಥವಾ ನಾವೇ ಆಗಿರಬಹುದು. ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡಿರುವುದಕ್ಕೆ ಸೂಕ್ತ ಕಾರಣ ನೀವು ತೋರಿಸದಿದ್ದರೆ, ನಾವು ನಮ್ಮದೇ ಆದ ತೀರ್ಮಾನಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಕೋರ್ಟ್ ಹೇಳಿದೆ.
ಬಿಲ್ಕಿಸ್ ಬಾನೊ ಪ್ರಕರಣದ ಅಪರಾಧಿಗಳಿಗೆ ಕ್ಷಮಾಪಣೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಲೇವಾರಿ ಮಾಡಲು ವಿಚಾರಣೆಯನ್ನು ನ್ಯಾಯಾಲಯ ಮೇ 2 ರಂದು ನಿಗದಿಪಡಿಸಿದ್ದು, ಎಲ್ಲಾ ಅಪರಾಧಿಗಳಿಗೆ ತಮ್ಮ ಉತ್ತರಗಳನ್ನು ಸಲ್ಲಿಸುವಂತೆ ಕೇಳಿದೆ. ಇನ್ನು ಇದೇ ವೇಳೆ ಮರುಪರಿಶೀಲನೆ ಅರ್ಜಿ ಸಲ್ಲಿಸುವ ಬಗ್ಗೆ ನಿಲುವು ಸ್ಪಷ್ಟಪಡಿಸುವಂತೆ ಕೇಂದ್ರ, ರಾಜ್ಯ ಸರ್ಕಾರಗಳಿಗೆ ಕೋರ್ಟ್ ಸೂಚಿಸಿದೆ.