ಜಾತ್ರೆಯಿಂದ ಮನೆಗೆ ಮರಳುತ್ತಿದ್ದ ಬುಡಕಟ್ಟು ಜನಾಂಗದ ಮೂವರು ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರ
ಒಡಿಶಾದ ಕಲಹಂಡಿ ಜಿಲ್ಲೆಯಲ್ಲಿ ಜಾತ್ರೆಯನ್ನು ವೀಕ್ಷಿಸಿ ಮನೆಗೆ ಮರಳುತ್ತಿದ್ದ ಬುಡಕಟ್ಟು ಜನಾಂಗದ ಮೂವರು ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರವೆಸಗಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
Published: 20th April 2023 05:02 PM | Last Updated: 20th April 2023 05:02 PM | A+A A-

ಸಾಂದರ್ಭಿಕ ಚಿತ್ರ
ಭವಾನಿಪಟ್ಟಣ: ಒಡಿಶಾದ ಕಲಹಂಡಿ ಜಿಲ್ಲೆಯಲ್ಲಿ ಜಾತ್ರೆಯನ್ನು ವೀಕ್ಷಿಸಿ ಮನೆಗೆ ಮರಳುತ್ತಿದ್ದ ಬುಡಕಟ್ಟು ಜನಾಂಗದ ಮೂವರು ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರವೆಸಗಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಏಪ್ರಿಲ್ 16ರ ರಾತ್ರಿ ಈ ಘಟನೆ ಸಂಭವಿಸಿದೆ. ಆರೋಪಿಗಳು ಬೇರೆ ಸಮುದಾಯದವರಾಗಿರುವುದರಿಂದ ಬುಡಕಟ್ಟು ಮುಖಂಡರು ಚರ್ಚಿಸಿ ಪೊಲೀಸರಿಗೆ ವಿಷಯ ತಿಳಿಸಲು ನಿರ್ಧರಿಸಿದ ನಂತರ ಬುಧವಾರ ಸಂಜೆ ಬಿಜೆಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
14 ರಿಂದ 17 ವರ್ಷದೊಳಗಿನ ಬಾಲಕಿಯರು ಜಾತ್ರೆಯನ್ನು ಮುಗಿಸಿಕೊಂಡು ಮನೆಗೆ ಹಿಂತಿರುಗುತ್ತಿದ್ದಾಗ ಬೇರೆ ಸಮುದಾಯಕ್ಕೆ ಸೇರಿದ ಐವರು ಪುರುಷರು ಅವರನ್ನು ತಡೆದು ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ಪತ್ತೆಗೆ ಶೋಧ ನಡೆಸಲಾಗುತ್ತಿದೆ ಎಂದು ಬಿಜೆಪುರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಲಿಂಗರಾಜ್ ಸೇಠಿ ತಿಳಿಸಿದ್ದಾರೆ.
ಐಪಿಸಿ ಸೆಕ್ಷನ್, ಪೊಕ್ಸೊ ಕಾಯ್ದೆ ಮತ್ತು ಎಸ್‌ಸಿ ಮತ್ತು ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ಅವರು ಹೇಳಿದರು.
ಇದನ್ನೂ ಓದಿ: ವಾಕಪಲ್ಲಿ 11 ಬುಡಕಟ್ಟು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ: 13 ಪೊಲೀಸರ ಖುಲಾಸೆ
ಈ ಪ್ರದೇಶದಲ್ಲಿ ಗಮನಾರ್ಹ ಮಾವೋವಾದಿಗಳ ಉಪಸ್ಥಿತಿಯಿದೆ. ಈ ಭೂಪ್ರದೇಶವು ಗುಡ್ಡಗಾಡು ಮತ್ತು ಕಾಡುಗಳನ್ನು ಹೊಂದಿದೆ. ಆರೋಪಿಗಳು ದಟ್ಟ ಅರಣ್ಯದಲ್ಲಿ ತಲೆಮರೆಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೂವರು ಬಾಲಕಿಯರ ಕುಟುಂಬಗಳು ಮೊದಲು ತಮ್ಮ ಮುಖಂಡರ ಬಳಿಗೆ ಬಂದವು. ಅವರು ಸಭೆ ಕರೆದರು. ಆರೋಪಿಗಳು ಬೇರೆ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ಅಲ್ಲಿ ಈ ವಿಷಯವನ್ನು ಪೊಲೀಸರಿಗೆ ತಿಳಿಸಲಾಗುವುದು ಎಂದು ನಿರ್ಧರಿಸಲಾಯಿತು. ಇದು ದೂರು ದಾಖಲಿಸಲು ವಿಳಂಬವಾಯಿತು ಎಂದು ಸ್ಥಳೀಯ ಮೂಲಗಳು ತಿಳಿಸಿವೆ.
ಮಹಿಳಾ ವೈದ್ಯರು ಲಭ್ಯವಿಲ್ಲದ ಕಾರಣ ಗುರುವಾರ ಬಾಲಕಿಯರು ವೈದ್ಯಕೀಯ ತಪಾಸಣೆಗಾಗಿ ಮೂರು ವಿವಿಧ ಆಸ್ಪತ್ರೆಗಳಿಗೆ ತೆರಳಬೇಕಾಯಿತು. ಕೊನೆಗೆ ಭವಾನಿಪಟ್ಟಣ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು.
ಇದನ್ನೂ ಓದಿ: ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ, ಕೃತ್ಯದ ಬಳಿಕ ದುಪ್ಪಟಾದಿಂದ ಮರಕ್ಕೆ ನೇಣು ಬಿಗಿಯಲು ಯತ್ನ
24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸದಿದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ಕಾಳಹಂಡಿ ಆದಿವಾಸಿ ಸಂಘದ ಅಧ್ಯಕ್ಷ ಪ್ರಕಾಶ್ ಮಾಝಿ ಎಚ್ಚರಿಸಿದ್ದಾರೆ. ಸಂಘದ ತಂಡ ಬಾಲಕಿಯರ ಗ್ರಾಮಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಲಿದೆ. ಮುಂದಿನ ಕ್ರಮವನ್ನು ನಿರ್ಧರಿಸಲು ಸಭೆ ನಡೆಸಲಾಗುವುದು ಎಂದರು.