ಛತ್ತೀಸ್‌ಗಢ: ವಿವಾಹ ಸಮಾರಂಭದಲ್ಲಿ ವ್ಯಕ್ತಿಯಿಂದ ರಾಸಾಯನಿಕ ದಾಳಿ, ವಧು-ವರ ಸೇರಿ 12 ಮಂದಿಗೆ ಗಾಯ
ವಿವಾಹ ಸಮಾರಂಭವೊಂದರಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಆ್ಯಸಿಡ್ ರೀತಿಯ ವಸ್ತುವಿನಿಂದ ದಾಳಿ ನಡೆಸಿದ್ದು, ಪರಿಣಾಮ ವಧು-ವರ ಸೇರಿ 12 ಮಂದಿ ಗಾಯಗೊಂಡಿರುವ ಘಟನೆ ಛತ್ತೀಸ್‌ಗಢದ ಬಸ್ತಾರ್ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.
Published: 20th April 2023 02:25 PM | Last Updated: 20th April 2023 02:25 PM | A+A A-

ಸಂಗ್ರಹ ಚಿತ್ರ
ಜಗ್ದಲ್‌ಪುರ: ವಿವಾಹ ಸಮಾರಂಭವೊಂದರಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಆ್ಯಸಿಡ್ ರೀತಿಯ ವಸ್ತುವಿನಿಂದ ದಾಳಿ ನಡೆಸಿದ್ದು, ಪರಿಣಾಮ ವಧು-ವರ ಸೇರಿ 12 ಮಂದಿ ಗಾಯಗೊಂಡಿರುವ ಘಟನೆ ಛತ್ತೀಸ್‌ಗಢದ ಬಸ್ತಾರ್ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.
ಭಾನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಛೋಟೆ ಅಮಾಬಲ್ ಗ್ರಾಮದಲ್ಲಿ ಬುಧವಾರ ಸಂಜೆ ವಿವಾಹ ಸಮಾರಂಭ ನಡೆಯುತ್ತಿದ್ದು. ಈ ವೇಳೆ ಸ್ಥಳಕ್ಕೆ ಬಂದಿರುವ ವ್ಯಕ್ತಿಯೊಬ್ಬ ಆ್ಯಸಿಡ್ ರೀತಿಯ ವಸ್ತುವಿನಿಂದ ದಾಳಿ ನಡೆಸಿದ್ದಾನೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯಲ್ಲಿ ವರ ದಮರುಧರ್ ಬಾಘೇಲ್ (25), ವಧು ಸುನಿತಾ ಕಹಸ್ಯಪ್ (19) ಮತ್ತು ಇತರ 10 ಮಂದಿಗೆ ಸಣ್ಣಪುಟ್ಟ ಸುಟ್ಟ ಗಾಯಗಳಾಗಿವೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಾಥಮಿಕ ಮಾಹಿತಿ ಪ್ರಕಾರ, ವಧುವಿನ ಮನೆಯಲ್ಲಿ ಮದುವೆ ನಡೆಯುತ್ತಿದ್ದಾಗ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಈ ವೇಳೆ ಎದುರಾತ ಕತ್ತಲೆಯನ್ನೇ ದುರ್ಬಳಕೆಗೆ ಮಾಡಿಕೊಂಡಿರುವ ಆರೋಪಿ, ಮಂಟಪದಲ್ಲಿ ಕುಳಿತಿದ್ದ ವಧು ಮತ್ತು ವರನ ಮೇಲೆ ರಾಸಾಯನಿಕ ವಸ್ತುವಿನಿಂದ ದಾಳಿ ನಡೆಸಿದ್ದಾನೆ. ಈ ವೇಳೆ ವಧು-ವರ ಸೇರಿ ಸುತ್ತ ಕುಳಿತಿದ್ದ ಕುಟುಂಬದ ಸದಸ್ಯರ ಮೇಲೂ ರಾಸಾಯನಿಕ ವಸ್ತು ಬಿದ್ದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ನಾರಾಯಣಪುರ ಕಾಂಗ್ರೆಸ್ ಶಾಸಕ ಚಂದನ್ ಕಶ್ಯಪ್ ಕೂಡ ವಿವಾಹ ಸಮಾರಂಭಕ್ಕೆ ಆಗಮಿಸಿದ್ದು, ಗಾಯಾಳುಗಳನ್ನು ತಮ್ಮ ಬೆಂಗಾವಲು ಪಡೆಯ ವಾಹನದಲ್ಲಿ ಭಾನ್‌ಪುರಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಗಾಯಗೊಂಡ 12 ಜನರಲ್ಲಿ ವಧು, ವರ ಮತ್ತು ಇತರೆ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಗದಲ್‌ಪುರದ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಈ ನಡುವೆ ವರ ಬಾಘೆಲ್ ಅವರನ್ನು ಗುರುವಾರ ಬೆಳಿಗ್ಗೆ ಡಿಸ್ಚಾರ್ಜ್ ಮಾಡಲಾಗಿದೆ, ಇತರರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವರದಿಗಳು ತಿಳಿಸಿವೆ.
ಘಟನೆ ಸಂಬಂಧ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.