'2024ರವರೆಗೂ ಏಕೆ... ನಾನು ಈಗಲೇ ಸಿಎಂ ಆಗಲು ಸಿದ್ಧ': ಅಜಿತ್ ಪವಾರ್ ಅಚ್ಚರಿ ಹೇಳಿಕೆ!

2024ರವರೆಗೂ ಏಕೆ... ನಾನು ಈಗಲೇ ಸಿಎಂ ಆಗಲು ಸಿದ್ಧ ಎಂದು ಹೇಳುವ ಮೂಲಕ ಮತ್ತೆ ಎನ್ ಸಿಪಿ ಮುಖಂಡ ಅಜಿತ್ ಪವಾರ್ ಬಂಡಾಯದ ಬಾವುಟ ಹಾರಿಸುವ ಸುಳಿವು ನೀಡಿದ್ದಾರೆ.
ಅಜಿತ್ ಪವಾರ್
ಅಜಿತ್ ಪವಾರ್

ಮುಂಬೈ: 2024ರವರೆಗೂ ಏಕೆ... ನಾನು ಈಗಲೇ ಸಿಎಂ ಆಗಲು ಸಿದ್ಧ ಎಂದು ಹೇಳುವ ಮೂಲಕ ಮತ್ತೆ ಎನ್ ಸಿಪಿ ಮುಖಂಡ ಅಜಿತ್ ಪವಾರ್ ಬಂಡಾಯದ ಬಾವುಟ ಹಾರಿಸುವ ಸುಳಿವು ನೀಡಿದ್ದಾರೆ.

ಮಹಾರಾಷ್ಟ್ರದ ಶರದ್ ಪವಾರ್ ಅವರ ನಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ)ಯಲ್ಲಿ ಮತ್ತೊಮ್ಮೆ ಬಂಡಾಯ ಎದ್ದಿದ್ದು, ಸದ್ಯಕ್ಕೆ ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ. ಎನ್‌ಸಿಪಿ ಮುಖಂಡ ಹಾಗೂ ಶರದ್ ಪವಾರ್ ಅವರ ಸಹೋದರನ ಮಗ ಅಜಿತ್ ಪವಾರ್ ಸ್ವಪಕ್ಷದ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. 2024ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ತಾವು ಉನ್ನತ ಹುದ್ದೆಯ ಗುರಿ ಹೊಂದಿದ್ದೀರಾ ಎಂಬ ಪ್ರಶ್ನೆಗೆ ಅಜಿತ್ ಪವಾರ್, "2024 ಏಕೆ, ಈಗಲೂ ನಾನು ಮುಖ್ಯಮಂತ್ರಿಯಾಗಲು ಹಾತೊರೆಯುತ್ತಿದ್ದೇನೆ," ಎಂದು ಹೇಳಿದ್ದಾರೆ.

ಶುಕ್ರವಾರ ಮರಾಠಿ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿರುವ ಅವರು, "ನಾವು ಜಾತ್ಯತೀತತೆ ಮತ್ತು ಪ್ರಗತಿಪರ ಬಗ್ಗೆ ಮಾತನಾಡುತ್ತಿದ್ದೆವು. ಆದರೆ, 2019ರಲ್ಲಿ ಕಾಂಗ್ರೆಸ್, ಎನ್‌ಸಿಪಿ ಪಕ್ಷಗಳು ಸೇರಿ ಸರ್ಕಾರ ರಚಿಸಲು ಶಿವಸೇನೆಯೊಂದಿಗೆ ಮೈತ್ರಿ ಮಾಡಿಕೊಂಡೆವು. ಶಿವಸೇನೆ ಹಿಂದುತ್ವದ ಪಕ್ಷವಾಗಿರುವುದರಿಂದ ನಾವು ಜಾತ್ಯತೀತತೆ ಪ್ರಶ್ನೆಯಿಂದಾಗಿ ಬೇರ್ಪಟ್ಟಿದ್ದೇವೆ," ಎಂದು ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿ ಬಗ್ಗೆ ಅಜಿತ್ ಪವಾರ್ ಬಹಿರಂಗಪಡಿಸಿದರು.

ಅಜಿತ್ ಪವಾರ್ ಅವರ ಭವಿಷ್ಯದ ರಾಜಕೀಯ ನಡೆಯ ಬಗ್ಗೆ ಅನುಮಾನಗಳು ಸುತ್ತುವರೆದಿದ್ದು, ಎನ್‌ಸಿಪಿಯಲ್ಲಿ ಬಿರುಕು ಮೂಡಿದೆ ಎಂಬ ವದಂತಿಗಳ ನಡುವೆ ಇಂತಹ ಸ್ಫೋಟಕ ಹೇಳಿಕೆಯೊಂದು ಹೊರಬಿದ್ದಿದೆ. ಮಹಾರಾಷ್ಟ್ರದಲ್ಲಿ ಕಳೆದ ವರ್ಷ ಏಕನಾಥ್ ಶಿಂಧೆ ನೇತೃತ್ವದ ಬಂಡಾಯ ಗುಂಪು ಮಹಾ ವಿಕಾಸ್ ಅಘಾಡಿ ಸರ್ಕಾರವನ್ನು ಉರುಳಿಸಿತು. ಈ ಮೂಲಕ ಮಹಾರಾಷ್ಟ್ರದಲ್ಲಿ ರಾಜಕೀಯ ಅಸ್ಥಿರತೆಯನ್ನು ಎದುರಿಸಬೇಕಾಯಿತು. ನಂತರ ರಾಜ್ಯದಲ್ಲಿ ಸರ್ಕಾರ ರಚಿಸಲು ಏಕನಾಥ್ ಶಿಂಧೆ ಅವರ ಶಿವಸೇನೆ ಬಣ ಬಿಜೆಪಿಯೊಂದಿಗೆ ಕೈಜೋಡಿಸಿತು. ಶಿವಸೇನೆ ನಾಯಕ ಏಕನಾಥ್ ಶಿಂಧೆ ಮುಖ್ಯಮಂತ್ರಿಯಾದರೆ, ಬಿಜೆಪಿಯ ದೇವೇಂಧ್ರ ಫಡ್ನವೀಸ್ ಉಪಮುಖ್ಯಮಂತ್ರಿಯಾದರು.

ಇದೀಗ ಎನ್‌ಸಿಪಿಯಲ್ಲಿ ಬಂಡಾಯವೆದ್ದಿರುವ ಅಜಿತ್ ಪವಾರ್ ಮತ್ತು ಅವರ ನಿಷ್ಠ ಶಾಸಕರ ಗುಂಪು ಆಡಳಿತಾರೂಢ ಬಿಜಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬಹುದು ಎಂಬ ಊಹಾಪೋಹಗಳು ಹರಿದಾಡುತ್ತಿವೆ. ಆದರೆ, ಇಂತಹ ಎಲ್ಲಾ ವದಂತಿಗಳನ್ನು ಅಜಿತ್ ಪವಾರ್ ತಳ್ಳಿ ಹಾಕಿದ್ದು, ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಾಗಲಿ ಮತ್ತು ಬಿಜೆಪಿಯೊಂದಿಗೆ ಕೈಜೋಡಿಸುವ ಕುರಿತ ವರದಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಹೇಳಿದ್ದಾರೆ.

ಈ ವೇಳೆ ಮುಂಬೈನಲ್ಲಿ ನಡೆದ ಎನ್‌ಸಿಪಿ ಸಭೆಯಲ್ಲಿ ಅಜಿತ್ ಪವಾರ್ ಪಾಲ್ಗೊಂಡಿರಲಿಲ್ಲ. ಎನ್‌ಸಿಪಿ ಸಭೆ ನಡೆಯುವ ಸಮಯದಲ್ಲೇ ಇತರ ಕೆಲವು ಕಾರ್ಯಕ್ರಮಗಳಿಗೆ ಹಾಜರಾಗಬೇಕಾಗಿದ್ದರಿಂದ ಸಭೆಗೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ಎನ್‌ಸಿಪಿ ನಾಯಕ ಅಜಿತ್ ಪವಾರ್ ಸ್ಪಷ್ಟಪಡಿಸಿದ್ದಾರೆ.  ಎನ್‌ಸಿಪಿ ಪಕ್ಷದ ಸಭೆಗೆ ಅಜಿತ್ ಪವಾರ್ ಹಾಜರಾಗಿಲ್ಲವೆಂದರೆ ಅವರು ಪಕ್ಷವನ್ನು ತೊರೆಯಲು ಯೋಜಿಸುತ್ತಿದ್ದಾರೆ ಎಂದರ್ಥವಲ್ಲ ಎಂದು ಎನ್‌ಸಿಪಿ ಹೇಳಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com