ಅರುಣಾಚಲ: ಆಸ್ತಿ ಮಾಹಿತಿ ಮರೆಮಾಚಿದ್ದ ಬಿಜೆಪಿ ಶಾಸಕಿಯ ಆಯ್ಕೆ ಅಸಿಂಧುಗೊಳಿಸಿದ ಹೈಕೋರ್ಟ್
ಚುನಾವಣಾ ಅಫಿಡವಿಟ್‌ನಲ್ಲಿ ತಮ್ಮ ಆಸ್ತಿಯ ಮಾಹಿತಿಯನ್ನು ಮರೆಮಾಚಿದ್ದಕ್ಕಾಗಿ ಅರುಣಾಚಲ ಪ್ರದೇಶದ ಬಿಜೆಪಿ ಶಾಸಕಿ ದಸಾಂಗ್ಲು ಪುಲ್ ಅವರ ಆಯ್ಕೆಯನ್ನು ಗುವಾಹತಿ ಹೈಕೋರ್ಟ್ ಅಸಿಂಧುಗೊಳಿಸಿದೆ.
Published: 27th April 2023 01:08 PM | Last Updated: 27th April 2023 02:29 PM | A+A A-

ಸಾಂದರ್ಭಿಕ ಚಿತ್ರ
ಇಟಾನಗರ: ಚುನಾವಣಾ ಅಫಿಡವಿಟ್‌ನಲ್ಲಿ ತಮ್ಮ ಆಸ್ತಿಯ ಮಾಹಿತಿಯನ್ನು ಮರೆಮಾಚಿದ್ದಕ್ಕಾಗಿ ಅರುಣಾಚಲ ಪ್ರದೇಶದ ಬಿಜೆಪಿ ಶಾಸಕಿ ದಸಾಂಗ್ಲು ಪುಲ್ ಅವರ ಆಯ್ಕೆಯನ್ನು ಗುವಾಹತಿ ಹೈಕೋರ್ಟ್ ಅಸಿಂಧುಗೊಳಿಸಿದೆ.
ಹೈಕೋರ್ಟ್‌ನ ಇಟಾನಗರ ಪೀಠ ಏಪ್ರಿಲ್ 25 ರಂದು ನೀಡಿದ ಆದೇಶದಲ್ಲಿ ಪ್ರಜಾಪ್ರತಿನಿಧಿ ಕಾಯ್ದೆಯಡಿ ಅಂಜಾವ್ ಜಿಲ್ಲೆಯ ಹಯುಲಿಯಾಂಗ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕಿಯ ಆಯ್ಕೆಯನ್ನು ಅಸಿಂಧು ಎಂದು ಘೋಷಿಸಿದೆ.
ಮಾಜಿ ಮುಖ್ಯಮಂತ್ರಿ ಕಲಿಖೋ ಪುಲ್ ಅವರ ಮೂರನೇ ಪತ್ನಿ ದಸಾಂಗ್ಲು ಪುಲ್(45) ಅವರು 2019 ರಲ್ಲಿ ಎರಡನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.
2019 ರಲ್ಲಿ ಪುಲ್ ವಿರುದ್ಧ ಸೋತ ಕಾಂಗ್ರೆಸ್ ಅಭ್ಯರ್ಥಿ ಲುಪಾಲಂ ಕ್ರಿ ಅವರು ಬಿಜೆಪಿ ಅಭ್ಯರ್ಥಿಯ ಆಯ್ಕೆಯನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
ಇದನ್ನು ಓದಿ: ಅಸ್ಸಾಂ-ಅರುಣಾಚಲ ನಡುವಿನ 50 ವರ್ಷಗಳ ಗಡಿ ವಿವಾದ ಅಂತ್ಯ: ಅಮಿತ್ ಶಾ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ!
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾನಿ ತಗಿಯಾ ಅವರ ಪೀಠ, ಪ್ರಜಾಪ್ರತಿನಿಧಿ ಕಾಯಿದೆ, 1951 ರ ಸೆಕ್ಷನ್ 33 ರ ಪ್ರಕಾರ ನಾಮಪತ್ರವನ್ನುಕ್ರಮಬದ್ಧವಾಗಿ ಸಲ್ಲಿಸಿಲ್ಲ. ಹೀಗಾಗಿ ಸದರಿ ಅಭ್ಯರ್ಥಿಯ ಆಯ್ಕೆಯನ್ನು ಸೆಕ್ಷನ್ 36 (2) (a) ಅಡಿಯಲ್ಲಿ ತಿರಸ್ಕರಿಸಲಾಗಿದೆ ಎಂದು ತೀರ್ಪು ನೀಡಿದೆ.
ಪುಲ್ ಅವರು ಸಲ್ಲಿಸಿದ ಅಫಿಡವಿಟ್‌ನಲ್ಲಿ ಮುಂಬೈನಲ್ಲಿರುವ ತನ್ನ ಗಂಡನ ನಾಲ್ಕು ಮತ್ತು ಅರುಣಾಚಲ ಪ್ರದೇಶದಲ್ಲಿರುವ ಎರಡು ಆಸ್ತಿಗಳನ್ನು ಘೋಷಿಸಿಲ್ಲ. ಕಾರಣ ಅವರ ಉಮೇದುವಾರಿಕೆ ದೋಷಪೂರಿತವಾಗಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಆರೋಪಿಸಿದ್ದರು.