ದೆಹಲಿ ಸಿಎಂ ನಿವಾಸದ 'ಸೌಂದರ್ಯ್ಯೀಕರಣ'ಕ್ಕೆ 45 ಕೋಟಿ ರೂ. ಖರ್ಚು; ಕೇಜ್ರಿವಾಲ್ ವಿರುದ್ಧ ಕಾಂಗ್ರೆಸ್ ವಾಗ್ದಾಳಿ
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಅಧಿಕೃತ ನಿವಾಸದ ನವೀಕರಣಕ್ಕೆ 45 ಕೋಟಿ ರೂ. ಖರ್ಚು ಮಾಡಿರುವ ಆರೋಪದ ಬಗ್ಗೆ ಆಮ್ ಆದ್ಮಿ ಪಕ್ಷದ ವಿರುದ್ಧ ಕಾಂಗ್ರೆಸ್ ಗುರುವಾರ ತೀವ್ರ ವಾಗ್ದಾಳಿ ನಡೆಸಿದ್ದು, ಇದು 'ನಾಚಿಕೆಗೇಡಿನ ಸಂಗತಿ' ಮತ್ತು ಇದು ಪಕ್ಷವು ತನ್ನ ಮತದಾರರ ಮುಖಕ್ಕೆ ಕಪಾಳಮೋಕ್ಷ ಮಾಡಿದಂತೆ ಎಂದು ಹೇಳಿದೆ.
Published: 27th April 2023 04:56 PM | Last Updated: 27th April 2023 05:24 PM | A+A A-

ಅರವಿಂದ್ ಕೇಜ್ರಿವಾಲ್
ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಅಧಿಕೃತ ನಿವಾಸದ ನವೀಕರಣಕ್ಕೆ 45 ಕೋಟಿ ರೂ. ಖರ್ಚು ಮಾಡಿರುವ ಆರೋಪದ ಬಗ್ಗೆ ಆಮ್ ಆದ್ಮಿ ಪಕ್ಷದ ವಿರುದ್ಧ ಕಾಂಗ್ರೆಸ್ ಗುರುವಾರ ತೀವ್ರ ವಾಗ್ದಾಳಿ ನಡೆಸಿದ್ದು, ಇದು 'ನಾಚಿಕೆಗೇಡಿನ ಸಂಗತಿ' ಮತ್ತು ಇದು ಪಕ್ಷವು ತನ್ನ ಮತದಾರರ ಮುಖಕ್ಕೆ ಕಪಾಳಮೋಕ್ಷ ಮಾಡಿದಂತೆ ಎಂದು ಹೇಳಿದೆ.
ಕಾಂಗ್ರೆಸ್ ನಾಯಕ ಅಜಯ್ ಮಾಕನ್ ಅವರು ಒಂದೆಡೆ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪಕ್ಷದ ಮಾಧ್ಯಮ ವಿಭಾಗದ ಮುಖ್ಯಸ್ಥ ಪವನ್ ಖೇರಾ ಅವರು, ಮಾಕನ್ ಅವರು ಸರಿಯಾದ ಮಾತನ್ನು ಹೇಳಿದ್ದಾರೆ ಎಂದರು.
ಎಎಪಿ ವಿರುದ್ಧ ವಾಗ್ದಾಳಿ ನಡೆಸಿದ ಖೇರಾ, 'ನೀವು ನಿಮ್ಮನ್ನು 'ಆಮ್ ಆದ್ಮಿ (ಸಾಮಾನ್ಯ ವ್ಯಕ್ತಿ)' ಎಂದು ಕರೆದುಕೊಳ್ಳುತ್ತೀರಿ, ಈಗ ಯಾರೂ ನಿಮ್ಮನ್ನು 'ಆಮ್ ಆದ್ಮಿ' ಎಂದು ಪರಿಗಣಿಸುವುದಿಲ್ಲ ಎಂಬುದು ಬೇರೆ ವಿಷಯ. ಕೋವಿಡ್ ಸಮಯದಲ್ಲಿ ಜನರು ನರಳುತ್ತಿರುವಾಗ ಮತ್ತು ಆಮ್ಲಜನಕದ ಕೊರತೆ ಇದ್ದಾಗ ನೀವು ಏನು ಮಾಡುತ್ತಿದ್ದೀರಿ. ನಿಮ್ಮ ಮನೆಯನ್ನು ನವೀಕರಿಸಲು, ಈಜುಕೊಳವನ್ನು ನಿರ್ಮಿಸಲು, ಟೈಲ್ಸ್ ಅಳವಡಿಸಲು ಇತರೆ ನವೀಕರಣಕ್ಕಾಗಿ 45 ಕೋಟಿ ರೂ. ಖರ್ಚು ಮಾಡಿದ್ದೀರಿ. ಇದು ಆಮ್ ಆದ್ಮಿ ಸರ್ಕಾರವೇ?. ಇವೆಲ್ಲ ಆಶ್ಚರ್ಯಕರ ಸಂಗತಿಗಳು ಎಂದಿದ್ದಾರೆ.
'ನಿಮ್ಮಲ್ಲಿ ಕೆಲವರು ಆಶ್ಚರ್ಯ ಪಡುತ್ತಾರೆ ಆದರೆ, ವಾಸ್ತವ ಏನೆಂದು ನಮಗೆ ತಿಳಿದಿರುವುದರಿಂದ ನಮಗೆ ಆಶ್ಚರ್ಯವಿಲ್ಲ. ಆದರೆ, ಇದು ಯಾವ ರೀತಿಯ ಆಮ್ ಆದ್ಮಿ ಸರ್ಕಾರ ಎಂದು ನಾವಿನ್ನೂ ಆಶ್ಚರ್ಯ ಪಡುತ್ತಿದ್ದೇವೆ. ಸರ್ಕಾರ ಯಾವಾಗಲೂ ತನ್ನ ಪ್ರಾಮಾಣಿಕತೆ ಮತ್ತು ಸರಳತೆಯ ಬಗ್ಗೆ ಘಂಟಾಘೋಷವಾಗಿ ಹೇಳುತ್ತಿತ್ತು' ಎಂದು ಕಾಂಗ್ರೆಸ್ ವಕ್ತಾರರು ಹೇಳಿದ್ದಾರೆ.
ಇದನ್ನೂ ಓದಿ: ದೆಹಲಿಯಲ್ಲಿ ಕಟ್ಟಡ ಕಾರ್ಮಿಕರಿಗೆ ವಸತಿ, ಉಚಿತ ಪ್ರಯಾಣ, ಜೀವ ವಿಮೆ ಸೌಲಭ್ಯ: ಕೇಜ್ರಿವಾಲ್ ಘೋಷಣೆ
ಸರ್ಕಾರದ ಅಧಿಕೃತ ನಿವಾಸದಲ್ಲಿ ಉಳಿಯುವುದಿಲ್ಲ, ಯಾವುದೇ ಭದ್ರತೆಯನ್ನು ತೆಗೆದುಕೊಳ್ಳುವುದಿಲ್ಲ ಮತ್ತು ಕೆಂಪು ಬೀಕನ್ ಕಾರನ್ನು ಬಳಸುವುದಿಲ್ಲ ಎಂದು ಕೇಜ್ರಿವಾಲ್ ಹೇಳಿದ್ದನ್ನು ಒತ್ತಿಹೇಳಿರುವ ಮಾಕೆನ್ ಅವರು, ಚುನಾವಣೆಯ ಸಮಯದಲ್ಲಿ ನೀಡಿದ ಅಫಿಡವಿಟ್ ಅನ್ನು ತೋರಿಸಿದ್ದಾರೆ ಎಂದು ಖೇರಾ ಹೇಳಿದರು.
ಈಗ ಅವರ ಸೆಕ್ಯುರಿಟಿ ನೋಡ್ತಾ ಇದ್ದೀರಾ, ಒಬ್ಬ ಎಂಎಲ್‌ಎಯಾದರೂ ಮುಖ್ಯಮಂತ್ರಿಗಳ ಮನೆಗೆ ಬರಲು ಸಾಧ್ಯವೇ. ಶೀಲಾ ದೀಕ್ಷಿತ್ ಅವರು ಸಿಎಂ ಆಗಿದ್ದಾಗ ಈ ಸ್ಥಳಕ್ಕೆ ಸಮೀಪದಲ್ಲಿಯೇ ಮನೆ ಇತ್ತು ಮತ್ತು ಸಾಮಾನ್ಯ ಜನರು ಅಪಾಯಿಂಟ್‌ಮೆಂಟ್ ಇಲ್ಲದೆಯೇ ಅವರನ್ನು ಬೆಳಗ್ಗೆ ಭೇಟಿಯಾಗಬಹುದಿತ್ತು. ಶಾಸಕರು, ಕಾರ್ಯಕರ್ತರು ಯಾವಾಗ ಬೇಕಾದರೂ ಮನೆಗೆ ಹೋಗಬಹುದಿತ್ತು ಎಂದು ಖೇರಾ ಹೇಳಿದರು.
15 ವರ್ಷಗಳ ಆಡಳಿತದಲ್ಲಿ ಶೀಲಾ ದೀಕ್ಷಿತ್ ಮತ್ತು ಅವರ ಸಂಪುಟದಲ್ಲಿನ ಸಚಿವರ ಮನೆಗಳ ನವೀಕರಣದ ಬಜೆಟ್ ಅನ್ನು ನೀವು ನೋಡಬಹುದು. ಅದನ್ನು ಮುಖ್ಯಮಂತ್ರಿಯೊಬ್ಬರ ಮನೆಗೆ ಖರ್ಚು ಮಾಡುತ್ತಿರುವ 45 ಕೋಟಿ ರೂ.ಗಳಿಗೆ ಹೋಲಿಸಬಹುದು. ಇದು ನಾಚಿಕೆಗೇಡಿನ ಸಂಗತಿ. ಒಂದು ರೀತಿಯಲ್ಲಿ ತಮ್ಮ ಮತದಾರರ ಮುಖಕ್ಕೆ ಕಪಾಳಮೋಕ್ಷ ಮಾಡುತ್ತಿರುವುದು ಬೇಸರದ ಸಂಗತಿಯಾಗಿದ್ದು, ಇದಕ್ಕಿಂತ ಕಡಿಮೆ ಏನಿಲ್ಲ ಎಂದರು.