
ನಿತೀಶ್ ಕುಮಾರ್ - ಲಾಲು ಪ್ರಸಾದ್
ಪಾಟ್ನಾ: ಏಳು ತಿಂಗಳ ನಂತರ ಪಾಟ್ನಾಗೆ ಆಗಮಿಸಿದ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರನ್ನು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಶುಕ್ರವಾರ ಭೇಟಿ ಮಾಡಿದ್ದಾರೆ.
ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ದೇಶಾದ್ಯಂತ ವಿರೋಧ ಪಕ್ಷಗಳನ್ನು ಒಗ್ಗೂಡಿಸಲು ಉಭಯ ನಾಯಕರು ಜಂಟಿಯಾಗಿ ಕೆಲಸ ಮಾಡಲಿದ್ದಾರೆ ಎಂಬ ಊಹಾಪೋಹಗಳ ನಡುವೆ ಈ ಭೇಟಿ ನಡೆದಿದೆ.
ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರು ದೆಹಲಿಯಿಂದ ಪಾಟ್ನಾದ ತಮ್ಮ ಮನೆಗೆ ಆಗಮಿಸಿದ ಗಂಟೆಗಳ ನಂತರ ಶುಕ್ರವಾರ ಸಂಜೆ ಮಾಜಿ ಮುಖ್ಯಮಂತ್ರಿ ಮತ್ತು ಪ್ರಸಾದ್ ಅವರ ಪತ್ನಿ ರಾಬ್ರಿ ದೇವಿ ಅವರ ನಿವಾಸಕ್ಕೆ ನಿತೀಶ್ ಕುಮಾರ್ ಆಗಮಿಸಿದರು.
ಇದನ್ನು ಓದಿ: 2024ರ ಹಾದಿ: ಪ್ರತಿಪಕ್ಷಗಳನ್ನು ಒಗ್ಗೂಡಿಸುವ ಯತ್ನದಲ್ಲಿ ನಿತೀಶ್; ಶೀಘ್ರದಲ್ಲೇ ಪಟ್ನಾಯಕ್, ಕೆಸಿಆರ್ ಭೇಟಿ
ಪ್ರಸಾದ್ ಅವರು ಸುಮಾರು ಏಳು ತಿಂಗಳುಗಳಿಂದ ಪಾಟ್ನಾದಿಂದ ದೂರವಿದ್ದರು. ಈ ಸಮಯದಲ್ಲಿ ಅವರು ಸಿಂಗಾಪುರದಲ್ಲಿ ಮೂತ್ರಪಿಂಡ ಕಸಿ ಮಾಡಿಸಿಕೊಂಡರು ಮತ್ತು ದೆಹಲಿಯಲ್ಲಿರುವ ಅವರ ಹಿರಿಯ ಮಗಳು ಮಿಸಾ ಭಾರತಿ ಅವರ ಮನೆಯಲ್ಲಿ ವಿಶ್ರಾಂತಿ ಪಡೆದಿದ್ದಾರೆ.
ಅರ್ಧ ಗಂಟೆಗೂ ಹೆಚ್ಚು ಕಾಲ ನಡೆದ ಇಬ್ಬರು ಹಿರಿಯ ನಾಯಕರ ಭೇಟಿಯಲ್ಲಿ ಏನು ಚರ್ಚೆಯಾಯಿತು ಎಂಬುದು ಇನ್ನೂ ತಿಳಿದುಬಂದಿಲ್ಲ.