
ಸಂಸದ ಶ್ರೀಕಾಂತ್ ಶಿಂಧೆ
ನವದೆಹಲಿ: ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಪುತ್ರ, ಸಂಸದ ಶ್ರೀಕಾಂತ್ ಶಿಂದೆ ಮಂಗಳವಾರ ಲೋಕಸಭೆಯಲ್ಲಿ ಹನುಮಾನ್ ಚಾಲೀಸಾ ಪಠಿಸಿದರು. ಅವಿಶ್ವಾಸ ನಿರ್ಣಯ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಅವರು, ಹಿಂದುತ್ವ ಮತ್ತು ಬಾಳ್ ಠಾಕ್ರೆಯವರ ಸಿದ್ಧಾಂತವನ್ನು ತೊರೆದಿರುವುದಕ್ಕೆ ಉದ್ಧವ್ ಠಾಕ್ರೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಮಹಾರಾಷ್ಟ್ರದಲ್ಲಿ 2019ರಲ್ಲಿ ಶಿವಸೇನಾ-ಬಿಜೆಪಿ ಮೈತ್ರಿಕೂಟಕ್ಕೆ ಜನರು ಬಹುಮತ ನೀಡಿದ್ದರು. ಆದರೆ. ಉದ್ದವ್ ಠಾಕ್ರೆ ಕಾಂಗ್ರೆಸ್, ಎನ್ ಸಿಪಿ ಜೊತೆ ಸೇರುವ ಮೂಲಕ ಮತದಾರರಿಗೆ ಅನ್ಯಾಯ ಮಾಡಿದರು. ಮುಖ್ಯಮಂತ್ರಿಯಾಗಬೇಕೆಂಬ ಉದ್ದೇಶದಿಂದ ಬಾಳಾ ಸಾಹೇಬ್ ಸಿದ್ದಾಂತ ಮತ್ತು ಹಿಂದುತ್ವ ಸಿದ್ದಾಂತವನ್ನು ಗಾಳಿಗೆ ತೂರಿದರು. ಅಷ್ಟೇ ಅಲ್ಲದೇ 1990ರಲ್ಲಿ ಕರ ಸೇವಕರನ್ನೆ ಸುಟ್ಟ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದೆ ಎಂದು ಆರೋಪಿಸಿದರು.
ಭ್ರಷ್ಟಾಚಾರದೊಂದಿಗೆ ಸಮನಾರ್ಥವಾಗಿದ್ದ ಯುಪಿಎಯನ್ನು INDIA ಎಂದು ಮರು ನಾಮಕರಣ ಮಾಡಲಾಗಿದೆ. ಇದು ಎನ್ ಡಿಎ vs INDIA ಮಾತ್ರ ಅಲ್ಲ, ಆದರೆ ಸ್ಕೀಮ್ ವರ್ಸಸ್ ಹಗರಣ ಎಂದು ವಿಪಕ್ಷಗಳ ವಿರುದ್ಧ ಕಿಡಿಕಾರಿದರು. ಜನರು ಹನುಮಾನ್ ಚಾಲೀಸ್ ಪಠಿಸುವುದನ್ನು ತಡೆಯಲಾಗುತ್ತಿದೆ. ನನಗೆ ಚಾಲೀಸಾ ಗೊತ್ತಿದೆ ಎಂದು ಹೇಳಿ ಪಠಿಸಲು ಆರಂಬಿಸಿದರು. ಆಗ ಮಾತು ಮುಂದುವರೆಸುವಂತೆ ಸ್ಪೀಕರ್ ಸೂಚಿಸಿದ್ದರಿಂದ ಅರ್ಧಕ್ಕೆ ನಿಲ್ಲಿಸಿದರು.