
ಸಾಂದರ್ಭಿಕ ಚಿತ್ರ
ಡೆಹ್ರಾಡೂನ್: ಉತ್ತರಾಖಂಡದಾದ್ಯಂತ ಭಾರಿ ಮಳೆಯಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ ಮಳೆ ಸಂಬಂಧಿತ ಪ್ರತ್ಯೇಕ ಘಟನೆಗಳಲ್ಲಿ ಒಂಬತ್ತು ಜನ ಸಾವನ್ನಪ್ಪಿದ್ದಾರೆ.
ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಬುಧವಾರ ಪರಿಸ್ಥಿತಿಯನ್ನು ಪರಿಶೀಲಿಸಿದ್ದು, ಎಚ್ಚರಿಕೆ ವಹಿಸುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಮಳೆ ಸಂಬಂಧಿತ ಘಟನೆಯಲ್ಲಿ ಒಬ್ಬ ವ್ಯಕ್ತಿ ಕಾಣೆಯಾಗಿದ್ದು, ಸುಮಾರು ಅರ್ಧ ಡಜನ್ ಜನರು ಗಾಯಗೊಂಡಿದ್ದಾರೆ.
ಕೇದಾರನಾಥ ಯಾತ್ರೆಯ ಮೂಲ ಶಿಬಿರವಾದ ಗೌರಿಕುಂಡ್‌ನಲ್ಲಿ ಬುಧವಾರ ಬೆಳಗ್ಗೆ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಭೂಕುಸಿತ ಸಂಭವಿಸಿದ್ದು, ಘಟನೆಯಲ್ಲಿ ಇಬ್ಬರು ಸಹೋದರರು ಸಾವನ್ನಪ್ಪಿದ್ದಾರೆ ಮತ್ತು ಒಬ್ಬರು ಗಾಯಗೊಂಡರು. ಐದು ದಿನಗಳಲ್ಲಿ ಗೌರಿಕುಂಡ್‌ನಲ್ಲಿ ಸಂಭವಿಸಿದ ಎರಡನೇ ಭೂಕುಸಿತ ಇದಾಗಿದೆ.
ಇದನ್ನು ಓದಿ: ಉತ್ತರಾಖಂಡ್: ಸೆಲ್ಫಿ ತೆಗೆದುಕೊಳ್ಳುವಾಗ ಜಾರಿ ಬಿದ್ದು ವೈದ್ಯಕೀಯ ವಿದ್ಯಾರ್ಥಿನಿ ಸಾವು
ಗೌರಿಕುಂಡ್ ಗ್ರಾಮದ ಹೆಲಿಪ್ಯಾಡ್ ಬಳಿಯ ಕುಟೀರವು ಬೆಟ್ಟದ ಮೇಲಿನಿಂದ ಕುಸಿದು ಬಿದ್ದಿದ್ದು, ಒಂದೇ ಕುಟುಂಬದ ನಾಲ್ವರು ಅವಶೇಷಗಳಲ್ಲಿ ಹೂತುಹೋಗಿದ್ದಾರೆ ಎಂದು ರುದ್ರಪ್ರಯಾಗ ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ನಂದನ್ ಸಿಂಗ್ ರಾಜ್ವರ್ ಅವರು ತಿಳಿಸಿದ್ದಾರೆ.
ಜಾನಕಿ ಎಂಬ ಮಹಿಳೆಯನ್ನು ಅವಶೇಷಗಳಿಂದ ರಕ್ಷಿಸಲಾಗಿದ್ದು, ಅವರಿಗೆ ಯಾವುದೇ ಗಾಯಗಳಾಗಿಲ್ಲ. ಆದರೆ ಅವರ ಮೂವರು ಮಕ್ಕಳ ಪೈಕಿ ಇಬ್ಬರು ಅವಶೇಷಗಳಡಿ ಸಿಲುಕಿ ಮೃತಪಟ್ಟಿದ್ದು, ಎಂಟು ವರ್ಷದ ಬಾಲಕಿ ಗಾಯಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.