
ಬುಲ್ಡೋಜರ್
ರಾಯ್ಪುರ: ಚುನಾವಣಾ ಕಣವಾಗಿರುವ ಚತ್ತೀಸ್ ಗಢದಲ್ಲಿ ಬುಲ್ಡೋಜರ್ ಮಾಡಲ್ ಪ್ರಯೋಗದ ಮಾತುಗಳು ಕೇಳಿಬಂದಿವೆ. ರಾಜ್ಯ ಘಟಕದ ಬಿಜೆಪಿ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡು ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸಂಸದ ಅರುಣ್ ಸಾವೋ ಅವರಿಗೆ ರಾಜ್ಯ ಘಟಕ ಬುಲ್ಡೋಜರ್ ಪ್ರತಿಕೃತಿಯನ್ನು ಉಡುಗೊರೆ ನೀಡಿದೆ.
ಈ ವೇಳೆ ಮಾತನಾಡಿರುವ ಅರುಣ್ ಸಾವೋ, ನಮ್ಮ ಪಕ್ಷ ಹಾಗೂ ನಾಯಕರು ಅನ್ಯಾಯದ ವಿರುದ್ಧ ಹೋರಾಡಲು ಬದ್ಧರಾಗಿದ್ದಾರೆ, ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ರಾಜ್ಯದಲ್ಲಿ ಅಧಿಕಾರದಿಂದ ಕೆಳಗಿಳಿಸುತ್ತೇವೆ ಚುನಾವಣೆ ಬಳಿಕ ಬಿಜೆಪಿ ಸರ್ಕಾರ ರಚನೆ ಮಾಡಲಿದ್ದು, ರಾಜ್ಯದಲ್ಲಿ ಹೆಚ್ಚುತ್ತಿರುವ ಅಪರಾಧಗಳು ಕಾನೂನು ಉಲ್ಲಂಘನೆ ವಿರುದ್ಧ ಬುಲ್ಡೋಜರ್ ಗಳನ್ನು ಬಳಕೆ ಮಾಡುತ್ತೇವೆ ಎಂದು ಸಾವೋ ಹೇಳಿದ್ದಾರೆ.
ಸಾವೋ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಭೂಪೇಶ್ ಬಘೇಲ್, ಈ ಹಿಂದೆ ರಮಣ್ ಸಿಂಗ್ ಅವಧಿಯಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿ, ಕಮಿಷನ್ ತೆಗೆದುಕೊಳ್ಳುತ್ತಿದ್ದ ಬಿಜೆಪಿ ನಾಯಕರ ವಿರುದ್ಧ ಬುಲ್ಡೋಜರ್ ಡೆಮಾಲಿಷನ್ ಅಭಿಯಾನ ಕೈಗೊಳ್ಳುವ ಬಗ್ಗೆ ಬಿಜೆಪಿ ಚಿಂತನೆ ನಡೆಸಲಿ ಎಂದು ಭೂಪೇಶ್ ಬಘೇಲ್ ಹೇಳಿದ್ದಾರೆ.
ಇದನ್ನೂ ಓದಿ: ನುಹ್ ನಲ್ಲಿ ಬುಲ್ಡೋಜರ್ ಗಳಿಗೆ ಬ್ರೇಕ್ ಹಾಕಿದ ಹೈಕೋರ್ಟ್ ಆದೇಶ
"ಬುಲ್ಡೋಜರ್ ಶಿಕ್ಷೆಯನ್ನು ಆಶ್ರಯಿಸುವುದನ್ನು ನಾವು ನಂಬುವುದಿಲ್ಲ. ಕಾನೂನು ಸುವ್ಯವಸ್ಥೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಚಲ ನಂಬಿಕೆ ಇದೆ. ಮತ್ತು ಛತ್ತೀಸ್‌ಗಢದಲ್ಲಿ ಶಾಂತಿ ನೆಲೆಸಿದ್ದು, ಕಾನೂನು ಸುವ್ಯವಸ್ಥೆ ಜಾರಿಯಲ್ಲಿದೆ. ಬಿಜೆಪಿಯ ರಾಜಕೀಯವು ದ್ವೇಷ ಮತ್ತು ಹಿಂಸಾಚಾರವನ್ನು ಆಧರಿಸಿದೆ, ಏಕೆಂದರೆ ಅವರ ನಾಯಕರು ಜನರನ್ನು ಪ್ರಚೋದಿಸಲು ಪ್ರಯತ್ನಿಸುವ ಮೂಲಕ ಅಧಿಕಾರವನ್ನು ಪಡೆಯಲು ಯಾವುದೇ ಹಂತಕ್ಕೆ ಹೋಗಬಹುದು” ಎಂದು ಸಿಎಂ ಬಘೇಲ್ ಹೇಳಿದ್ದಾರೆ.