
ನಾಯಿ ಮೇಲೆ ಆ್ಯಸಿಡ್ ಎರಚಿದ ಮಹಿಳೆ
ಮುಂಬೈ: ತನ್ನ ಸಾಕು ಬೆಕ್ಕಿನೊಂದು ಆಟವಾಡುತ್ತಿದ್ದ ನಾಯಿ ಮೇಲೆ 35 ವರ್ಷದ ಮಹಿಳೆಯೊಬ್ಬರು ಆ್ಯಸಿಡ್ ಎರಚಿದ ಧಾರುಣ ಘಟನೆ ಮುಂಬೈನಲ್ಲಿ ವರದಿಯಾಗಿದೆ.
ಮುಂಬೈನ ಮಾಳವಣಿ ಪ್ರದೇಶದಲ್ಲಿ ನಡೆದಿದ್ದು, ಶಬಿಸ್ತಾ ಸುಹೇಲ್ ಅನ್ಸಾರಿ ಎಂಬ ಮಹಿಳೆಯನ್ನು ನಾಯಿ ಮೇಲೆ ಆ್ಯಸಿಡ್ ಎರಚಿದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ. ತಾನು ವಾಸಿಸುವ ಕಟ್ಟಡದಲ್ಲಿಯೇ ಇರುವ ಕುಟುಂಬಕ್ಕೆ ಸೇರಿದ ನಾಯಿಯ ಮೇಲೆ ಶಬಿಸ್ತಾ ಸುಹೇಲ್ ಅನ್ಸಾರಿ ಎಂಬ ಮಹಿಳೆ ಆಸಿಡ್ ಎರಚಿದ್ದಾರೆ.
ಪೊಲೀಸರ ಪ್ರಕಾರ, ಮಹಿಳೆಯ ಮೇಲೆ ಐಪಿಸಿಯ ಹಲವಾರು ಸೆಕ್ಷನ್‌ಗಳ ಅಡಿಯಲ್ಲಿ ಪ್ರಾಣಿಗಳಿಗೆ ಕ್ರೌರ್ಯ ಆರೋಪವಿದೆ. ದಾಳಿಯಲ್ಲಿ ನಾಯಿಗೆ ತೀವ್ರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಪಶು ಆಸ್ಪತ್ರೆಗೆ ಸಾಗಿಸಲಾಗಿದೆ. ಇಡೀ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಇಂದೋರ್: ಸಾಕು ನಾಯಿಗಳ ವಿಚಾರಕ್ಕೆ ಗುಂಡಿನ ದಾಳಿ, ಇಬ್ಬರು ಸ್ಥಳದಲ್ಲೇ ಸಾವು; ಆರು ಮಂದಿಗೆ ಗಾಯ
ಬ್ರೌನಿ ಎಂಬ ನಾಯಿ ತನ್ನ ಬೆಕ್ಕಿನೊಂದಿಗೆ ಆಟವಾಡುತ್ತಿದ್ದರಿಂದ ಮಹಿಳೆ ಅಸಮಾಧಾನಗೊಂಡಿದ್ದಳು. ಅವಳು ತನ್ನ ಬೆಕ್ಕಿನಿಂದ ನಾಯಿಯನ್ನು ದೂರವಿಡುವಂತೆ ನಾಯಿಯ ಮಾಲೀಕರಿಗೆ ಎಚ್ಚರಿಕೆ ಕೂಡ ನೀಡಿದ್ದಳು. ಅದಾಗ್ಯೂ ನಾಯಿ ತನ್ನ ಬೆಕ್ಕಿನೊಂದಿಗೆ ಆಟವಾಡುತ್ತಿದ್ದನ್ನು ಅರಗಿಸಿಕೊಳ್ಳಲಾಗದ ಶಬಿಸ್ತಾ ಸುಹೇಲ್ ಅನ್ಸಾರಿ ನಾಯಿ ಮೇಲೆ ಆ್ಯಸಿಡ್ ಎರಚಿದ್ದಾಳೆ.
ಈ ಇಡೀ ಘಟನೆ ಕಟ್ಟಡದ ಭದ್ರತಾ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ದೃಶ್ಯಾವಳಿಗಳಲ್ಲಿ ಮಹಿಳೆ ನಾಯಿಯ ಬಳಿಗೆ ಬಂದು ಆಸಿಡ್ ಸುರಿಯುವುದನ್ನು ತೋರಿಸಿದೆ. ನಾಯಿ ನೋವಿನಿಂದ ಗೋಳಾಡುವುದು ಮತ್ತು ಓಡಿಹೋಗುವುದು ಕೂಡ ಕ್ಯಾಮೆರಾದಲ್ಲಿ ದಾಖಲಾಗಿದೆ.