ಉತ್ತರಾಖಂಡ: ಬಸ್ಸು ಕಮರಿಗೆ ಬಿದ್ದು 8 ಪ್ರಯಾಣಿಕರು ಸಾವು, 27 ಮಂದಿಗೆ ಗಾಯ
ಬಸ್ಸೊಂದು ಕಮರಿಗೆ ಬಿದ್ದ ಪರಿಣಾಮ 8 ಪ್ರಯಾಣಿಕರು ಸಾವನ್ನಪ್ಪಿದ್ದು, 27 ಮಂದಿ ಗಾಯಗೊಂಡಿರುವ ದಾರುಣ ಘಟನೆ ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಗಂಗೋತ್ರಿಯ ಬಳಿ ಭಾನುವಾರ ನಡೆದಿದೆ.
Published: 20th August 2023 08:57 PM | Last Updated: 21st August 2023 02:09 PM | A+A A-

ಕಮರಿಗೆ ಬಿದ್ದ ಬಸ್
ಉತ್ತರಕಾಶಿ: ಬಸ್ಸೊಂದು ಕಮರಿಗೆ ಬಿದ್ದ ಪರಿಣಾಮ 8 ಪ್ರಯಾಣಿಕರು ಸಾವನ್ನಪ್ಪಿದ್ದು, 27 ಮಂದಿ ಗಾಯಗೊಂಡಿರುವ ದಾರುಣ ಘಟನೆ ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಗಂಗೋತ್ರಿಯ ಬಳಿ ಭಾನುವಾರ ನಡೆದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಂಗೋತ್ರಿ ರಾಷ್ಟ್ರೀಯ ಹೆದ್ದಾರಿಯ ಗಂಗನಾನಿ ಬಳಿ ಸಂಭವಿಸಿದ ಬಸ್ ಅಪಘಾತದಲ್ಲಿ ಗಾಯಗೊಂಡಿರುವ 27 ಪ್ರಯಾಣಿಕರ ಪೈಕಿ 10 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಎಸ್‌ಡಿಆರ್‌ಎಫ್ ಕಮಾಂಡೆಂಟ್ ಮಣಿಕಾಂತ್ ಮಿಶ್ರಾ ಸುದ್ದಿಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.
ಉತ್ತರ ಪ್ರದೇಶ ನೋಂದಣಿಯ ಬಸ್ 50 ಮೀಟರ್ ಆಳದ ಕಮರಿಗೆ ಬಿದ್ದಿದೆ. ಇದರಲ್ಲಿ ಗುಜರಾತ್‌ನ ಪ್ರಯಾಣಿಕರು ಇದ್ದರು ಎಂದು ರಕ್ಷಣಾ ತಂಡದ ಭಾಗವಾಗಿರುವ ಕಾನ್‌ಸ್ಟೆಬಲ್ ಕುಲದೀಪ್ ತಿಳಿಸಿದ್ದಾರೆ. ಬಸ್ ನಲ್ಲಿ ಸುಮಾರು 32-33 ಮಂದಿ ಇದ್ದರು ಎನ್ನಲಾಗಿದೆ. ಗಾಯಗೊಂಡ 27 ಜನರನ್ನು ರಕ್ಷಿಸಿ ಆಸ್ಪತ್ರೆಗೆ ರವಾನಿಸಲಾಗಿದೆ.
ಡಿಎಂ ಮತ್ತು ಎಸ್ಪಿ ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ಈ ಮಧ್ಯೆ ಬಸ್ ಅಪಘಾತದಲ್ಲಿ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡುವಂತೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಧಾ ರತುರಿಗೆ ಸೂಚನೆ ನೀಡಿದ್ದಾರೆ.