ತಮಿಳುನಾಡಿಗೆ ನೀಟ್ ವಿನಾಯಿತಿ ಸಿಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ: ಸಿಎಂ ಸ್ಟಾಲಿನ್
ತಮಿಳುನಾಡಿಗೆ ರಾಷ್ಟ್ರೀಯ ಪ್ರವೇಶ ಮತ್ತು ಅರ್ಹತಾ ಪರೀಕ್ಷೆ ವಿನಾಯಿತಿ ಪಡೆಯಲು ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುವುದು ಎಂದು ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ(DMK) ಅಧ್ಯಕ್ಷ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಭರವಸೆ ನೀಡಿದ್ದಾರೆ.
Published: 20th August 2023 04:43 PM | Last Updated: 20th August 2023 04:43 PM | A+A A-

ಎಂ ಕೆ ಸ್ಟಾಲಿನ್
ಚೆನ್ನೈ: ತಮಿಳುನಾಡಿಗೆ ರಾಷ್ಟ್ರೀಯ ಪ್ರವೇಶ ಮತ್ತು ಅರ್ಹತಾ ಪರೀಕ್ಷೆ ವಿನಾಯಿತಿ ಪಡೆಯಲು ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುವುದು ಎಂದು ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ(DMK) ಅಧ್ಯಕ್ಷ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಭರವಸೆ ನೀಡಿದ್ದಾರೆ. ಅವರ ಪುತ್ರ ಹಾಗೂ ಸಂಪುಟ ಸಚಿವ ಉದಯನಿಧಿ ಅವರು ಪಕ್ಷದ ರಾಜ್ಯವ್ಯಾಪಿ ಉಪವಾಸ ಸತ್ಯಾಗ್ರಹವನ್ನು ರದ್ದುಗೊಳಿಸುವಂತೆ ಒತ್ತಾಯಿಸಿದ್ದಾರೆ.
ಕೇಂದ್ರೀಯ ಅರ್ಹತಾ ಪರೀಕ್ಷೆಯಿಂದ ತಮಿಳುನಾಡಿಗೆ ವಿನಾಯಿತಿ ಸಿಗುವವರೆಗೂ ಡಿಎಂಕೆ ಹೋರಾಟ ನಿಲ್ಲಿಸುವುದಿಲ್ಲ ಎಂದು ಸ್ಟಾಲಿನ್ ಹೇಳಿದ್ದಾರೆ.
ರಾಜ್ಯದ ನೀಟ್ ವಿರೋಧಿ ಮಸೂದೆಯ ಪರವಾಗಿ ತಾನು ಎಂದಿಗೂ ಸಹಿ ಹಾಕುವುದಿಲ್ಲ ಎಂದು ಇತ್ತೀಚೆಗೆ ಗವರ್ನರ್ ಆರ್‌ಎನ್ ರವಿ ನೀಡಿರುವ ಹೇಳಿಕೆ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ ಸ್ಟಾಲಿನ್, ವಿಷಯ ಈಗ ರಾಷ್ಟ್ರಪತಿಗಳ ಬಳಿ ಇದೆ ರಾಜ್ಯಪಾಲರು ಪೋಸ್ಟ್ ಮ್ಯಾನ್ ನಂತೆ ವರ್ತಿಸುತ್ತಿದ್ದಾರಷ್ಟೆ, ವಿಧಾನಸಭೆಯು ಕೈಗೆತ್ತಿಕೊಂಡ ವಿಷಯಗಳನ್ನು ರಾಷ್ಟ್ರಪತಿ ಭವನಕ್ಕೆ ಅವರು ಕಳುಹಿಸಬೇಕಷ್ಟೆ ಎಂದರು.
ಕೇಂದ್ರ ಸರ್ಕಾರ ವಿರುದ್ಧ ಆಡಳಿತಾರೂಢ ಪಕ್ಷದ ನಾಯಕರು ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರೆ, ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ ಆಗಸ್ಟ್ 23ರಂದು ಮಧುರೈ ಹೊರತುಪಡಿಸಿ ಬೇರೆ ಕಡೆಗಳಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ.
ಚೆನ್ನೈನ ವಳ್ಳುವರ್ ಕೊಟ್ಟಂನಲ್ಲಿನ ಪ್ರತಿಭಟನಾ ಸ್ಥಳದಲ್ಲಿ, ಡಿಎಂಕೆ ಯುವ ಘಟಕದ ಮುಖ್ಯಸ್ಥ ಉದಯನಿಧಿ ಅವರನ್ನು ಹಿರಿಯ ನಾಯಕರು ಮತ್ತು ಸಂಪುಟ ಸಚಿವರುಗಳಾದ ದುರೈಮುರುಗನ್, ಮಾ ಸುಬ್ರಮಣಿಯನ್ ಮತ್ತು ಪಿಕೆ ಸೇಕರ್ ಬಾಬು, ಪಕ್ಷದ ಸಂಸದರಾದ ದಯಾನಿಧಿ ಮಾರನ್, ಶಾಸಕರು ಮತ್ತು ಚೆನ್ನೈ ಮೇಯರ್ ಪ್ರಿಯಾ ಆರ್ ಜೊತೆ ಸೇರಿ ಪ್ರತಿಭಟನೆ ನಡೆಸಿದರು.
ಕಳೆದ ವಾರ ನೀಟ್ ಆಕಾಂಕ್ಷಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಆರೋಪದ ಹಿನ್ನೆಲೆಯಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತಿದೆ.
ಈ ಹೋರಾಟ ಮುಂದುವರಿಯುತ್ತದೆ, ನೀಟ್ ವಿನಾಯಿತಿ ಖಾತರಿಪಡಿಸುವವರೆಗೂ ಡಿಎಂಕೆ ನಿಲ್ಲುವುದಿಲ್ಲ. ಅಧಿಕಾರದಲ್ಲಿ ಇರಲಿ ಅಥವಾ ಇಲ್ಲದಿರಲಿ, ಈ ಚಳುವಳಿ ಜನರಿಗಾಗಿ ಕೆಲಸ ಮಾಡುತ್ತದೆ ಎಂದು ಸಿಎಂ ಹೇಳಿದರು. ಚೆನ್ನೈನಲ್ಲಿ ಪ್ರತಿಭಟನಾ ಸ್ಥಳದಲ್ಲಿ ಮಾತನಾಡಿದ ರಾಜ್ಯ ಸಚಿವ ದುರೈಮುರುಗನ್, ನೀಟ್ ವಿದ್ಯಾರ್ಥಿಗಳ ಹಿತಕ್ಕೆ ವಿರುದ್ಧವಾಗಿದೆ. ಡಿಎಂಕೆ ಇದನ್ನು ದೀರ್ಘಕಾಲದವರೆಗೆ ವಿರೋಧಿಸುತ್ತಿದೆ ಎಂದು ಹೇಳಿದರು.
ಹಿಂದಿನ ಎಐಎಡಿಎಂಕೆ ಮತ್ತು ಈಗಿನ ಡಿಎಂಕೆ ವಿಧಾನಸಭೆಯಲ್ಲಿ ನೀಟ್ ವಿರುದ್ಧ ನಿರ್ಣಯಗಳನ್ನು ಅಂಗೀಕರಿಸಿತ್ತು. ಪ್ರಸ್ತುತ, NEET ವಿರೋಧಿ ಮಸೂದೆಯು ರಾಷ್ಟ್ರಪತಿಯವರ ಒಪ್ಪಿಗೆಗಾಗಿ ಕಾಯುತ್ತಿದೆ.