
ಸಾಂದರ್ಭಿಕ ಚಿತ್ರ
ಪಾಲ್ಗರ್: ತಾಯಿಯ ನಡತೆ ಬಗ್ಗೆ ಅನುಮಾನಗೊಂಡ 17 ವರ್ಷದ ಹದಿಹರೆಯದ ಬಾಲಕನೊಬ್ಬ ಆಕೆಗೆ ಕೊಡಲಿಯಿಂದ ಹೊಡೆದು ಕೊಂದಿರುವ ಘಟನೆ ಮಹಾರಾಷ್ಟ್ರದ ಪಾಲ್ಗರ್ ಜಿಲ್ಲೆಯಲ್ಲಿ ನಡೆದಿದೆ. ತನ್ನ ತಾಯಿ ಮೊಬೈಲ್ ಫೋನ್‌ನಿಂದ ಯಾರಿಗೂ ಮೇಸೆಜ್ ಕಳುಹಿಸುವುದನ್ನು ನೋಡಿದ ಬಾಲಕ ಕೊಡಲಿಯಿಂದ ಕೊಚ್ಚಿ ಹತ್ಯೆ ಮಾಡಿದ್ದಾನೆ. ವಸಾಯಿ ಟೌನ್‌ಶಿಪ್‌ನ ಪರೋಲ್ ಪ್ರದೇಶದಲ್ಲಿ ಭಾನುವಾರ-ಸೋಮವಾರದ ಮಧ್ಯರಾತ್ರಿ ಈ ಘಟನೆ ನಡೆದಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಬಾಲಕನಿಗೆ ತನ್ನ ತಾಯಿ ಸೋನಾಲಿ ಗೊಗ್ರಾ (35) ನಡತೆ ಬಗ್ಗೆ ಅನುಮಾನವಿತ್ತು. ಈ ಸಂಬಂಧ ಇಬ್ಬರೂ ಆಗಾಗ್ಗೆ ಜಗಳವಾಡುತ್ತಿದ್ದರು. ಭಾನುವಾರ ರಾತ್ರಿ ಊಟ ಮಾಡುತ್ತಿದ್ದಾಗ ಆತನ ತಾಯಿ ಮೊಬೈಲ್‌ನಲ್ಲಿ ಯಾರಿಗೋ ಸಂದೇಶ ಕಳುಹಿಸುತ್ತಿರುವುದನ್ನು ಗಮನಿಸಿದ ಬಾಲಕ ಕೋಪಗೊಂಡಿದ್ದು, ನಂತರ ಕೊಡಲಿಯನ್ನು ಹೊರತೆಗೆದು ಆಕೆಗೆ ಹೊಡೆದಿದ್ದಾನೆ ಎಂದು ಮಾಂಡವಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಅಶೋಕ್ ಕಾಂಬಳೆ ತಿಳಿಸಿದ್ದಾರೆ.
ಘಟನೆಯ ವೇಳೆ ಕುಟುಂಬದ ಇತರ ಸದಸ್ಯರು ಮನೆಯಲ್ಲಿ ಇರಲಿಲ್ಲ. ತೀವ್ರವಾಗಿ ಗಾಯಗೊಂಡ ಮಹಿಳೆಯನ್ನು ಭಿವಂಡಿಯ ಇಂದಿರಾಗಾಂಧಿ ಸ್ಮಾರಕ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಲ್ಲಿ ಆಕೆ ಸಾವನ್ನಪ್ಪಿದ್ದಾಳೆಂದು ವೈದ್ಯರು ಘೋಷಿಸಿದರು. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಆದರೂ ಇನ್ನೂ ಆತನನ್ನು ಬಂಧಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.