ಕಾನೂನು ವೃತ್ತಿ ಉದಾತ್ತವಾದದ್ದು: ಬಿಲ್ಕಿಸ್ ಬಾನೋ ಪ್ರಕರಣದಲ್ಲಿ ಅಪರಾಧಿಯೋರ್ವ ವಕೀಲನೆಂದು ತಿಳಿದ ಸುಪ್ರೀಂ ಪ್ರತಿಕ್ರಿಯೆ 

ಕಾನೂನು ವೃತ್ತಿ ಉದಾತ್ತವಾದ ವೃತ್ತಿಯಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. 
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್

ನವದೆಹಲಿ: ಕಾನೂನು ವೃತ್ತಿ ಉದಾತ್ತವಾದ ವೃತ್ತಿಯಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. 2002 ರ ಗುಜರಾತ್ ಗಲಭೆ ವೇಳೆ ನಡೆದಿದ್ದ ಬಿಲ್ಕಿಸ್ ಬಾನೋ ಗ್ಯಾಂಗ್ ರೇಪ್ ಹಾಗೂ ಆಕೆಯ ಕುಟುಂಬದವರ ಹತ್ಯೆ ಪ್ರಕರಣದಲ್ಲಿನ ಓರ್ವ ಅಪರಾಧಿ ಕಾನೂನು ಅಭ್ಯಾಸ ಮಾಡುತ್ತಿದ್ದ ಎಂಬ ಬಗ್ಗೆ ತಿಳಿದು ಸುಪ್ರೀಂ ಕೋರ್ಟ್ ಅಚ್ಚರಿ ವ್ಯಕ್ತಪಡಿಸಿ ಈ ಹೇಳಿಕೆ ನೀಡಿದೆ. 

ಬಿಲ್ಕಿಸ್ ಬಾನೋ ಪ್ರಕರಣದ 11 ಅಪರಾಧಿಗಳ ಪೈಕಿ ಓರ್ವರಾಗಿರುವ ರಾಧೆಶ್ಯಾಮ್ ಶಾ ಅವರಿಗೆ ಅಕಾಲಿಕವಾಗಿ ಬಿಡುಗಡೆ ಮಾಡಿರುವುದನ್ನು ಸಮರ್ಥಿಸಿಕೊಂಡಿರುವ ವಕೀಲ ರಿಷಿ ಮಲ್ಹೋತ್ರಾ, ತಮ್ಮ ಕಕ್ಷಿದಾರರಿಗೆ 15 ವರ್ಷಗಳಿಗೂ ಹೆಚ್ಚಿನ ವಾಸ್ತವ ಶಿಕ್ಷೆಯ ಪ್ರಮಾಣವನ್ನು ಅನುಭವಿಸಿದ್ದಾರೆ ಹಾಗೂ ಅವರ ನಡಾವಳಿಕೆಯನ್ನು ಗಮನಿಸಿ ಸರ್ಕಾರ ಬಿಡುಗಡೆಯನ್ನು ಘೋಷಿಸಿದೆ ಎಂದು ನ್ಯಾ. ಬಿವಿ ನಾಗರತ್ನ ಹಾಗೂ ಉಜ್ಜಲ್ ಭುಯಾನ್ ಅವರಿದ್ದ ಪೀಠಕ್ಕೆ ಮನವರಿಕೆ ಮಾಡಿಕೊಡಲು ಯತ್ನಿಸಿದರು.

ಇಂದಿಗೆ ಬಿಡುಗಡೆಯಾಗಿ ಒಂದು ವರ್ಷವಾಗಿದೆ ಹಾಗೂ ನನ್ನ ವಿರುದ್ಧ ಒಂದೇ ಒಂದೂ ಪ್ರಕರಣಗಳಿಲ್ಲ. ನಾನು ಮೋಟರ್ ಅಪಘಾತ ಕ್ಲೈಮ್ ಟ್ರಿಬ್ಯೂನಲ್ ನಲ್ಲಿ ವಕೀಲನಾಗಿದ್ದೆ. ನಾನೂ  ವಕೀಲ, ನಾನು ಮತ್ತೆ ಅಭ್ಯಾಸವನ್ನು ಪ್ರಾರಂಭಿಸಿದ್ದೇನೆ ಎಂದು ಮಲ್ಹೋತ್ರಾ ತಮ್ಮ ಕಕ್ಷಿದಾರರ ಬಗ್ಗೆ ಕೋರ್ಟ್ ಗೆ ತಿಳಿಸಿದ್ದಾರೆ. 

ಅಪರಾಧ ಘೋಷಣೆಯಾದ ಬಳಿಕ,  ಕಾನೂನು ಅಭ್ಯಾಸ ಮಾಡುವುದಕ್ಕೆ ಪರವಾನಗಿ ಕೊಡಬಹುದೇ? ಕಾನೂನು ಎಂಬುದು ಉದಾತ್ತವಾದ ವೃತ್ತಿಯಾಗಿದೆ. ಓರ್ವ ಅಪರಾಧಿ ಕಾನೂನು ವೃತ್ತಿಯಲ್ಲಿ ಮುಂದುವರೆಯಬಹುದೇ? ಎಂಬುದನ್ನು ಬಾರ್ ಕೌನ್ಸಿಲ್ ಹೇಳಬೇಕು. ನೀವು ಅಪರಾಧಿ ಅದರಲ್ಲಿ ಯಾವುದೇ ಅನುಮಾನವಿಲ್ಲ. ನಿಮಗೆ ನೀಡಲಾದ ವಿನಾಯಿತಿಯಿಂದಾಗಿ ನೀವು ಜೈಲಿನಿಂದ ಹೊರಗಿದ್ದೀರಿ. ಶಿಕ್ಷೆಯನ್ನು ಮಾತ್ರ ಮೊಟಕುಗೊಳಿಸಲಾಗಿದೆ. ಅಪರಾಧ ಹಾಗೆಯೇ ಉಳಿದಿದೆ, ”ಎಂದು ನ್ಯಾಯಾಲಯ ಹೇಳಿದೆ. ಅದರ ಬಗ್ಗೆ ನನಗೆ ಖಚಿತವಿಲ್ಲ ಎಂದು ಶಾ ಪರ ವಕೀಲರು ಪ್ರತಿಕ್ರಿಯಿಸಿದ್ದಾರೆ.

ವಕೀಲರ ಕಾಯಿದೆಯ ಸೆಕ್ಷನ್ 24 ಎ, ನೈತಿಕ ಕ್ಷೋಭೆಯನ್ನು ಒಳಗೊಂಡ ಅಪರಾಧಕ್ಕೆ ಶಿಕ್ಷೆಗೊಳಗಾದ ವ್ಯಕ್ತಿಯನ್ನು ವಕೀಲರಾಗಿ ದಾಖಲಿಸಲಾಗುವುದಿಲ್ಲ ಎಂದು ಹೇಳುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com