ದೆಹಲಿ 1.75 ಲಕ್ಷ ಕೋಟಿ ರೂ. ತೆರಿಗೆ ಪಾವತಿಸಿದೆ, ಆದ್ರೆ ಕೇಂದ್ರ ಕೇವಲ 325 ಕೋಟಿ ರೂ. ನೀಡಿದೆ: ಕೇಜ್ರಿವಾಲ್
ದೆಹಲಿ ಜನ ಕಳೆದ ವರ್ಷ 1.75 ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚು ಆದಾಯ ತೆರಿಗೆ ಪಾವತಿಸಿದ್ದಾರೆ. ಆದರೆ ಕೇಂದ್ರ ಸರ್ಕಾರ ರಾಷ್ಟ್ರ ರಾಜಧಾನಿಯ ಅಭಿವೃದ್ದಿಗಾಗಿ 2023-24ನೇ ಸಾಲಿನ ಬಜೆಟ್‌ನಲ್ಲಿ ಕೇವಲ 325 ಕೋಟಿ ರೂಪಾಯಿ...
Published: 01st February 2023 03:59 PM | Last Updated: 01st February 2023 06:55 PM | A+A A-

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್
ನವದೆಹಲಿ: ದೆಹಲಿ ಜನ ಕಳೆದ ವರ್ಷ 1.75 ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚು ಆದಾಯ ತೆರಿಗೆ ಪಾವತಿಸಿದ್ದಾರೆ. ಆದರೆ ಕೇಂದ್ರ ಸರ್ಕಾರ ರಾಷ್ಟ್ರ ರಾಜಧಾನಿಯ ಅಭಿವೃದ್ದಿಗಾಗಿ 2023-24ನೇ ಸಾಲಿನ ಬಜೆಟ್‌ನಲ್ಲಿ ಕೇವಲ 325 ಕೋಟಿ ರೂಪಾಯಿ ನಿಗದಿಪಡಿಸಲಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಬುಧವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರ ರಾಜಧಾನಿಯ ವಿಚಾರದಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದ ದೆಹಲಿ ಸಿಎಂ, ಹಣದುಬ್ಬರ ಮತ್ತು ನಿರುದ್ಯೋಗದ ಸಮಸ್ಯೆಗಳಿಗೆ ಬಜೆಟ್ ಯಾವುದೇ ಪರಿಹಾರ ನೀಡಿಲ್ಲ ಎಂದಿದ್ದಾರೆ.
"ದೆಹಲಿ ಜನತೆಗೆ ಮತ್ತೆ ಮಲತಾಯಿ ಧೋರಣೆ. ಕಳೆದ ವರ್ಷ ದೆಹಲಿಯ ಜನ 1.75 ಲಕ್ಷ ಕೋಟಿ ರೂ.ಗೂ ಹೆಚ್ಚು ಆದಾಯ ತೆರಿಗೆ ಪಾವತಿಸಿದ್ದಾರೆ. ಅದರಲ್ಲಿ ಕೇವಲ 325 ಕೋಟಿ ರೂ. ದೆಹಲಿಯ ಅಭಿವೃದ್ಧಿಗೆ ನೀಡಲಾಗಿದೆ. ಇದು ದೆಹಲಿ ಜನತೆಗೆ ಮಾಡಿದ ಘೋರ ಅನ್ಯಾಯ” ಎಂದು ಕೇಜ್ರಿವಾಲ್ ಸರಣಿ ಟ್ವೀಟ್ ಮಾಡಿದ್ದಾರೆ.
ಬಜೆಟ್ ನಲ್ಲಿ ನಿರುದ್ಯೋಗವನ್ನು ತೊಡೆದುಹಾಕಲು ಯಾವುದೇ ಪ್ರಮುಖ ಯೋಜನೆ ಇಲ್ಲ. ಶಿಕ್ಷಣಕ್ಕೆ ನೀಡುವ ಅನುದಾನವನ್ನು ಶೇ. 2.64 ರಿಂದ ಶೇ.2.5 ಕ್ಕೆ ಇಳಿಸಿರುವುದು ದುರದೃಷ್ಟಕರ. ಆರೋಗ್ಯ ಬಜೆಟ್ ಅನ್ನು ಶೇ. 2.2 ರಿಂದ ಶೇ. ಶೇಕಡಾ 1.98ಕ್ಕೆ ಇಳಿಸಿರುವುದು ಹಾನಿಕಾರಕ" ಎಂದು ದೆಹಲಿ ಸಿಎಂ ಟ್ಟೀಟ್ ಮಾಡಿದ್ದಾರೆ.