ಕಣ್ಣೂರು: ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ; ಗರ್ಭಿಣಿ ಮಹಿಳೆ, ಪತಿ ಸಜೀವ ದಹನ
ಕಣ್ಣೂರು ಜಿಲ್ಲಾಸ್ಪತ್ರೆ ಬಳಿ ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಕಾರಿನಲ್ಲಿದ್ದ ಗರ್ಭಿಣಿ ಮಹಿಳೆ ಮತ್ತು ಆಕೆಯ ಪತಿ ಸಜೀವ ದಹನವಾಗಿರುವ ದಾರುಣ ಘಟನೆ ಗುರುವಾರ ನಡೆದಿದೆ.
Published: 02nd February 2023 04:45 PM | Last Updated: 02nd February 2023 04:45 PM | A+A A-

ಹೊತ್ತಿ ಉರಿದ ಕಾರು
ಕಣ್ಣೂರು: ಕಣ್ಣೂರು ಜಿಲ್ಲಾಸ್ಪತ್ರೆ ಬಳಿ ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಕಾರಿನಲ್ಲಿದ್ದ ಗರ್ಭಿಣಿ ಮಹಿಳೆ ಮತ್ತು ಆಕೆಯ ಪತಿ ಸಜೀವ ದಹನವಾಗಿರುವ ದಾರುಣ ಘಟನೆ ಗುರುವಾರ ನಡೆದಿದೆ.
ಇಲ್ಲಿನ ಜಿಲ್ಲಾ ಸರ್ಕಾರಿ ಆಸ್ಪತ್ರೆ ಬಳಿ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಮೃತ ದಂಪತಿಗಳನ್ನು ಕುಟ್ಟಿಯತ್ತೂರು ಕರಂಬುವಿನ ಪ್ರಜಿತ್(32) ಮತ್ತು ಅವರ ಪತ್ನಿ ರೀಶಾ (26) ಎಂದು ಗುರುತಿಸಲಾಗಿದ್ದು, ಇಬ್ಬರೂ ಕುಟ್ಟಿಯತ್ತೂರಿನಿಂದ ಜಿಲ್ಲಾ ಆಸ್ಪತ್ರೆಗೆ ತೆರಳುತ್ತಿದ್ದಾಗ ದುರಂತ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನು ಓದಿ: ಮುಂಬೈ-ಅಹಮದಾಬಾದ್ ಹೆದ್ದಾರಿಯ ಪಲ್ಘಾರ್ ಜಿಲ್ಲೆಯಲ್ಲಿ ಕಾರು-ಬಸ್ಸು ನಡುವೆ ಭೀಕರ ಅಪಘಾತ: ನಾಲ್ವರು ಸ್ಥಳದಲ್ಲೇ ಸಾವು
ಪ್ರಜಿತ್ ಮತ್ತು ರೀಶಾ ಇಬ್ಬರೂ ಕಾರಿನ ಮುಂದಿನ ಸೀಟ್ ನಲ್ಲಿ ಕುಳಿತಿದ್ದರು. ಕಾರಿನ ಹಿಂದಿನ ಸೀಟಿನಲ್ಲಿ ಮಗು ಸೇರಿದಂತೆ ಇನ್ನೂ ನಾಲ್ವರು ಪ್ರಯಾಣಿಕರಿದ್ದರು. ಕಾರಿಗೆ ಬೆಂಕಿ ಹೊತ್ತಿಕೊಂಡಾಗ ಆ ನಾಲ್ವರು ಕಾರಿನಿಂದ ಜಿಗಿದಿದ್ದಾರೆ.
ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಬೆಂಕಿ ಹೊತ್ತಿಕೊಂಡಾಗ ಕಾರು ಚಲಾಯಿಸುತ್ತಿದ್ದ ಪ್ರಜಿತ್ ಹಿಂಬಾಗಿಲು ತೆರೆದು ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಪ್ರಯಾಣಿಕರು ಪಾರಾಗಲು ಸಹಾಯ ಮಾಡಿದ್ದಾರೆ. ಆದರೆ ತಾವು ಪಾರಾಗಲು ಮುಂದಿನ ಬಾಗಿಲು ತೆರೆಯಲು ಯತ್ನಿಸಿ ವಿಫಲವಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳೀಯರ ಬೆಂಬಲದೊಂದಿಗೆ ಜಾಮ್ ಆಗಿದ್ದ ಮುಂಭಾಗದ ಬಾಗಿಲು ಒಡೆದಿದ್ದಾರೆ. ಆದರೆ, ಅಷ್ಟರಲ್ಲಿ ಪ್ರಜಿತ್ ಮತ್ತು ರೀಶಾ ಸಜೀವ ದಹನವಾಗಿದ್ದಾರೆ.