
ಬಿಜೆಪಿ ಲೋಗೋ
ಮೇಘಾಲಯ: ಮೇಘಾಲಯ ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳನ್ನು ಪ್ರಕಟಿಸಿದೆ.
ಎಲ್ಲಾ 60 ಸ್ಥಾನಗಳಲ್ಲಿಯೂ ಚುನಾವಣೆ ಎದುರಿಸುವುದಾಗಿ ಘೋಷಿಸಿರುವ ಬಿಜೆಪಿ, ಇಲ್ಲಿನ ಸಿಎಂ ಕಾನ್ರಾಡ್ ಕೆ ಸಂಗ್ಮಾ ಪ್ರತಿನಿಧಿಸುವ ಸೌತ್ ತುರಾ ಕ್ಷೇತ್ರದಲ್ಲಿ ತನ್ನ ಘಟಕದ ಉಪಾಧ್ಯಕ್ಷ ಹಾಗೂ ಮಾಜಿ ಭಯೋತ್ಪಾದಕ ನಾಯಕನನ್ನು ಕಣಕ್ಕಿಳಿಸಿದೆ.
ಗುರುವಾರದಂದು ಬಿಜೆಪಿ ಎಲ್ಲಾ ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಘೋಷಿಸಿದೆ.
ಕಳೆದ ತಿಂಗಳು ಆಡಳಿತಾರೂಢ ಮೇಘಾಲಯ ಡೆಮಾಕ್ರೆಟಿಕ್ ಅಲಾಯನ್ಸ್ ಜೊತೆಗೆ ಬಿಜೆಪಿ ಮೈತ್ರಿ ಮುರಿದುಕೊಂಡಿತ್ತು ಹಾಗೂ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಬಿಜೆಪಿ ಘೋಷಿಸಿತ್ತು.
ಇದನ್ನೂ ಓದಿ: ಫೆ.16 ಕ್ಕೆ ತ್ರಿಪುರಾ, ಫೆ.27 ರಂದು ನಾಗಾಲ್ಯಾಂಡ್- ಮೇಘಾಲಯದಲ್ಲಿ ವಿಧಾನಸಭೆ ಚುನಾವಣೆ: ಚುನಾವಣಾ ಆಯೋಗ
ಸಿಎಂ ವಿರುದ್ಧ ಕಣಕ್ಕಿಳಿಯುತ್ತಿರುವ ಬಿಜೆಪಿ ಅಭ್ಯರ್ಥಿ ಬೆರ್ನಾಡ್ ಮರಕ್, ಸಂಗ್ಮಾ ವಿರುದ್ಧದ ನಿಲುವಿನಿಂದಲೇ ಗುರುತಿಸಿಕೊಂಡಿದ್ದಾರೆ ಹಾಗೂ ತುರಾದಲ್ಲಿನ ತಮ್ಮ ಫಾರ್ಮ್ ಹೌಸ್ ನಲ್ಲಿ ವೇಶ್ಯಾವಾಟಿಕೆ ಹಾಗೂ ಅಕ್ರಮ ಅನೈತಿಕ ಚಟುವಟಿಕೆಗಳನ್ನು ನಡೆಸುತ್ತಿರುವ ಆರೋಪದಡಿ ಕಳೆದ ವರ್ಷ ಬಂಧನಕ್ಕೆ ಒಳಗಾಗಿದ್ದರು.
ಗಾರೋ ಬುಡಕಟ್ಟು ಜನರಿಗಾಗಿ ಪ್ರತ್ಯೇಕ ರಾಜ್ಯ ರೂಪಿಸುವ ಸಂಬಂಧ ಈ ವ್ಯಕ್ತಿ ಅಚಿಕ್ ರಾಷ್ಟ್ರೀಯ ಸ್ವಯಂ ಸೇವಕ ಪರಿಷತ್ (ಎಎನ್ ವಿಸಿ) ಗೆ ಸೇರ್ಪಡೆಗೊಂಡಿದ್ದರು. 2014 ರಲ್ಲಿ ಶಸ್ತ್ರಾಸ್ತ್ರಗಳನ್ನು ತ್ಯಾಗ ಮಾಡಿ ಎಎನ್ ವಿಸಿ (ಬಿ) ಎಂಬ ತಮ್ಮ ಸಂಘಟನೆಯನ್ನು ವಿಸರ್ಜಿಸಿದ್ದರು.