ಅಖಿಲೇಶ್ ಯಾದವ್ ಬೆಂಗಾವಲು ಪಡೆಯ ಆರು ಕಾರುಗಳು ಪರಸ್ಪರ ಡಿಕ್ಕಿ, ನಾಲ್ವರಿಗೆ ಗಂಭೀರ ಗಾಯ
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಬೆಂಗಾವಲು ಪಡೆಯ ಭಾಗವಾಗಿದ್ದ ಸುಮಾರು ಹನ್ನೆರಡು ವಾಹನಗಳು ಶುಕ್ರವಾರ ಅಪಘಾತಕ್ಕೀಡಾಗಿದ್ದು, ಘಟನೆಯಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
Published: 03rd February 2023 07:54 PM | Last Updated: 03rd February 2023 07:54 PM | A+A A-

ಅಖಿಲೇಶ್ ಯಾದವ್
ಲಖನೌ: ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಬೆಂಗಾವಲು ಪಡೆಯ ಭಾಗವಾಗಿದ್ದ ಸುಮಾರು ಹನ್ನೆರಡು ವಾಹನಗಳು ಶುಕ್ರವಾರ ಅಪಘಾತಕ್ಕೀಡಾಗಿದ್ದು, ಘಟನೆಯಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಎಸ್‌ಯುವಿ ಕಾರೊಂದು ಸ್ಪೀಡ್ ಬ್ರೇಕರ್‌ನಲ್ಲಿ ಹಠಾತ್ ನಿಲ್ಲಿಸಿದ ಪರಿಣಾಮ ಐದು ಕಾರುಗಳು ಹಿಂದಿನಿಂದ ಡಿಕ್ಕಿ ಹೊಡೆದಿವೆ. ಅಪಘಾತದಲ್ಲಿ ಕನಿಷ್ಠ ಆರು ವಾಹನಗಳಿಗೆ ಭಾರಿ ಹಾನಿಯಾಗಿದ್ದು, ನಾಲ್ವರು ಎಸ್ಪಿ ಕಾರ್ಯಕರ್ತರು ಗಂಭೀರವಾಗಿ ಗಾಯಗೊಂಡಿದ್ದಾರೆ. ಆದರೆ, ಅಖಿಲೇಶ್ ಯಾದವ್ ಅವರಿಗೆ ಯಾವುದೇ ಗಾಯಗಳಾಗಿಲ್ಲ. ಹೀಗಾಗಿ ಅವರು ತಮ್ಮ ಪ್ರಯಾಣ ಮುಂದುವರೆಸಿದರು.
ಇದನ್ನು ಓದಿ: ಯುಪಿ ಎಂಎಲ್‌ಸಿ ಚುನಾವಣೆ: ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು; ಒಂದು ಪಕ್ಷೇತರ ಅಭ್ಯರ್ಥಿಯ ಪಾಲು
ಮಾಜಿ ಸಿಎಂ ಅಖಿಲೇಶ್ ಯಾದವ್ ಅವರು ಮಧ್ಯಪ್ರದೇಶದ ಹರ್ದೋಯ್ ಜಿಲ್ಲೆಯ ಹರ್ಪಾಲ್‌ಪುರ ಪ್ರದೇಶದ ಬೈತಾಪುರ್ ಗ್ರಾಮದಲ್ಲಿ ಮದುವೆ ಸಮಾರಂಭದಲ್ಲಿ ಭಾಗವಹಿಸಲು ಹೋಗುತ್ತಿದ್ದರು.
ಈ ವೇಳೆ ಇಡೀ ಬೆಂಗಾವಲು ಪಡೆ ಕತ್ರಾ-ಬಿಲ್ಹೌರ್ ಹೆದ್ದಾರಿಯಲ್ಲಿ ಫರ್ಹತ್ ನಗರ ರೈಲ್ವೇ ಕ್ರಾಸಿಂಗ್ ಅನ್ನು ದಾಟುತ್ತಿದ್ದಂತೆ, ಎಸ್‌ಪಿ ಕಾರ್ಯಕರ್ತನ ವಾಹನವೊಂದರ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದ್ದಾರೆ. ಅದನ್ನು ಹಿಂಬಾಲಿಸುತ್ತಿದ್ದ ಇತರ ಕಾರುಗಳು ಹಿಂದಿನಿಂದ ಡಿಕ್ಕಿ ಹೊಡೆದಿವೆ.
ಘಟನೆಯ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಹಿಂದಿನಿಂದ ಕಾರುಗಳು ಒಂದಕ್ಕೊಂದು ಡಿಕ್ಕಿ ಹೊಡೆಯುವುದನ್ನು ವಿಡಿಯೋದಲ್ಲಿ ಕಾಣಬಹುದು. ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಖಿಲೇಶ್ ಅವರನ್ನು ಸುರಕ್ಷಿತವಾಗಿ ಅವರ ಗಮ್ಯಸ್ಥಾನಕ್ಕೆ ಕರೆದೊಯ್ಯಲಾಗಿದೆ.