ದೇವಸ್ಥಾನದಿಂದ ಹಣ ಕದ್ದ ಶಂಕೆ; ಯುವಕನನ್ನು ಹತ್ಯೆಗೈದ ಗುಂಪು, ನಾಲ್ವರ ವಿರುದ್ಧ ಪ್ರಕರಣ ದಾಖಲು
ಪೋರಬಂದರ್ ನಗರದ ಬೋಖಿರಾ ಪ್ರದೇಶದಲ್ಲಿ ಗುರುವಾರ ರಾತ್ರಿ ದೇವಸ್ಥಾನದಿಂದ ಹಣವನ್ನು ಕದ್ದ ಆರೋಪದ ಮೇಲೆ ಯುವಕನೊಬ್ಬನನ್ನು ಗುಂಪೊಂದು ಹತ್ಯೆ ಮಾಡಿದ್ದು, ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
Published: 03rd February 2023 12:42 PM | Last Updated: 03rd February 2023 02:41 PM | A+A A-

ಸಾಂದರ್ಭಿಕ ಚಿತ್ರ
ಪೋರಬಂದರ್: ಪೋರಬಂದರ್ ನಗರದ ಬೋಖಿರಾ ಪ್ರದೇಶದಲ್ಲಿ ಗುರುವಾರ ರಾತ್ರಿ ದೇವಸ್ಥಾನದಿಂದ ಹಣವನ್ನು ಕದ್ದ ಆರೋಪದ ಮೇಲೆ ಯುವಕನೊಬ್ಬನನ್ನು ಗುಂಪೊಂದು ಹತ್ಯೆ ಮಾಡಿದ್ದು, ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಸಂತ್ರಸ್ತನ ತಂದೆ ಕಿಶೋರ್ ಬಥಿಯಾ ಮಾತನಾಡಿ, 'ನನ್ನ 26 ವರ್ಷದ ಮಗ ಶ್ಯಾಮ್ ಬೀದಿಬದಿ ವ್ಯಾಪಾರಿಯಾಗಿದ್ದು, ಸೈಕಲ್‌ನಲ್ಲಿ ಸಂಚರಿಸುವ ಮೂಲಕ ಆ್ಯಸಿಡ್ ಮತ್ತು ಫಿನೈಲ್ ಮಾರಾಟ ಮಾಡುತ್ತಿದ್ದನು. ಬುಧವಾರ ಬೋಖಿರಾ ಪ್ರದೇಶಕ್ಕೆ ಪ್ರಯಾಣಿಸುತ್ತಿದ್ದಾಗ ವಚಾರ್ಡಾ ದಾದಾ ದೇವಸ್ಥಾನದ ಟ್ರಸ್ಟಿಗಳಾದ ಎಭಾಲ್ ಕಡ್ಚಾ, ಲಾಖಾ ಭೋಗೇಶ್ರಾ, ರಾಜು ಬೋಖಿರಿಯಾ ಮತ್ತು ಇತರರು ಆತನನ್ನು ತಡೆದು ಥಳಿಸಿದ್ದಾರೆ. ನಂತರ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಆದರೆ, ಆತ ಸಂಜೆ ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟಿದ್ದಾನೆ' ಎಂದು ದೂರಿದ್ದಾರೆ.
ವಾಚರ್ಡಾ ದಾದಾ ದೇವಸ್ಥಾನದಲ್ಲಿ ಯಾರೋ ಹಣ ಕದ್ದಿದ್ದಾರೆ. ಇದರಿಂದ ದೇವಸ್ಥಾನದ ಟ್ರಸ್ಟಿಗಳು ಶ್ಯಾಮ್ ತಾನೇ ದೇವಸ್ಥಾನದಿಂದ ಹಣವನ್ನು ಕದ್ದಿರುವುದಾಗಿ ತಪ್ಪೊಪ್ಪಿಕೊಳ್ಳುವಂತೆ ಹೇಳಲು ಥಳಿಸಿದ್ದಾರೆ. ತಾನು ಮಾಡದ ಅಪರಾಧವನ್ನು ಒಪ್ಪಿಕೊಳ್ಳುವಂತೆ ಒತ್ತಾಯಿಸಿದ್ದಾರೆ ಎಂದು ದೂರುದಾರರು ತಿಳಿಸಿದ್ದಾರೆ.
ಶ್ಯಾಮ್ ಅನೇಕ ಆಂತರಿಕ ಗಾಯಗಳಿಂದ ಮೃತಪಟ್ಟಿದ್ದಾನೆ ಎಂದು ಮರಣೋತ್ತರ ಪರೀಕ್ಷೆಯ ವರದಿ ಬಹಿರಂಗಪಡಿಸಿದೆ ಎಂದು ಅವರು ಹೇಳಿದರು.
ಸ್ಥಳೀಯ ಅಪರಾಧ ವಿಭಾಗದ ಪೊಲೀಸ್ ಇನ್ಸ್‌ಪೆಕ್ಟರ್ ಎಚ್.ಕೆ. ಶ್ರೀಮಾಲಿ ಮಾತನಾಡಿ, 'ಆರೋಪಿಗಳು ಸಂತ್ರಸ್ತನನ್ನು ಥಳಿಸಿದ ಬಗ್ಗೆ ನಾವು ಪುರಾವೆಗಳನ್ನು ಸಂಗ್ರಹಿಸಿದ್ದೇವೆ ಮತ್ತು 4 ಆರೋಪಿಗಳು ಮತ್ತು ಗುಂಪು ಹತ್ಯೆಯಲ್ಲಿ ಭಾಗಿಯಾಗಿರುವ ಎಲ್ಲರನ್ನು ಹುಡುಕುತ್ತಿದ್ದೇವೆ' ಎಂದು ಸುದ್ದಿಸಂಸ್ಥೆ ಐಎಎನ್‌ಎಸ್‌ಗೆ ತಿಳಿಸಿದರು.