ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿ ಆತ್ಮಹತ್ಯೆ ಸುದ್ದಿ ಕೇಳಿ ಹಾಸ್ಟೆಲ್ ವಾರ್ಡನ್‌ಗೆ ಹೃದಯಾಘಾತ, ವಿದ್ಯಾರ್ಥಿ ಸಂಬಂಧಿಕರಿಂದ ದಾಂಧಲೆ

ತಿರುಪತಿ ಜಿಲ್ಲೆಯ ಗುಡೂರು ಪಟ್ಟಣದ ನಾರಾಯಣ ಇಂಜಿನಿಯರಿಂಗ್ ಕಾಲೇಜಿನಲ್ಲಿ ಭಾನುವಾರ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾದ ಪೋಷಕರು ಆತನ ಸಾವಿಗೆ ಆಡಳಿತ ಮಂಡಳಿಯೇ ಹೊಣೆ ಎಂದು ಆರೋಪಿಸಿ ಕಾಲೇಜಿನ ಆಸ್ತಿಗೆ ಹಾನಿಯುಂಟು ಮಾಡಿದ್ದಾರೆ.
ವಿದ್ಯಾರ್ಥಿ ಸಂಬಂಧಿಕರಿಂದ ಕಾಲೇಜು ಆಸ್ತಿಗೆ ಹಾನಿ
ವಿದ್ಯಾರ್ಥಿ ಸಂಬಂಧಿಕರಿಂದ ಕಾಲೇಜು ಆಸ್ತಿಗೆ ಹಾನಿ

ತಿರುಪತಿ: ತಿರುಪತಿ ಜಿಲ್ಲೆಯ ಗುಡೂರು ಪಟ್ಟಣದ ನಾರಾಯಣ ಇಂಜಿನಿಯರಿಂಗ್ ಕಾಲೇಜಿನಲ್ಲಿ ಭಾನುವಾರ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾದ ಪೋಷಕರು ಆತನ ಸಾವಿಗೆ ಆಡಳಿತ ಮಂಡಳಿಯೇ ಹೊಣೆ ಎಂದು ಆರೋಪಿಸಿ ಕಾಲೇಜಿನ ಆಸ್ತಿಗೆ ಹಾನಿಯುಂಟು ಮಾಡಿದ್ದಾರೆ.

ಕಡಪ ಜಿಲ್ಲೆಯ ಪುಲಿವೆಂದುಲ ಮೂಲದ 21 ವರ್ಷದ ಧನೇಶ್ವರ ರೆಡ್ಡಿ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್‌ನಲ್ಲಿ ಎರಡನೇ ವರ್ಷ ಓದುತ್ತಿದ್ದ. ಶನಿವಾರ ರಾತ್ರಿ ಆತ ತನ್ನ ಹಾಸ್ಟೆಲ್ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. 

ಈ ಸಂಬಂಧ ಇತರೆ ವಿದ್ಯಾರ್ಥಿಗಳು ಹಾಸ್ಟೆಲ್ ವಾರ್ಡನ್ ಶ್ರೀನಿವಾಸುಲು ನಾಯ್ಡು ಅವರಿಗೆ ಮಾಹಿತಿ ನೀಡಿದ್ದಾರೆ. ಈ ಘಟನೆ ಬಗ್ಗೆ ತಿಳಿದು ಆಘಾತಕ್ಕೊಳಗಾದ 57 ವರ್ಷದ ವ್ಯಕ್ತಿ ಹೃದಯಾಘಾತದಿಂದ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ನಂತರ ಹಾಸ್ಟೆಲ್ ಸಿಬ್ಬಂದಿ ಅವರನ್ನು ಸಮೀಪದ ಆಸ್ಪತ್ರೆಗೆ ರವಾನಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದ ವೇಳೆ ವಾರ್ಡನ್ ಮೃತಪಟ್ಟಿದ್ದಾರೆ. 

ಪೊಲೀಸರ ಪ್ರಕಾರ, ಮರುದಿನ ಕಾಲೇಜಿಗೆ ಧಾವಿಸಿದ ವಿದ್ಯಾರ್ಥಿಯ ಸಂಬಂಧಿಕರು, ಎಂತದ್ದೇ ಸಂದರ್ಭ ಎದುರಾದರೂ ಧನೇಶ್ವರ ರೆಡ್ಡಿ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ಆತನ ಸಾವಿಗೆ ಕಾಲೇಜು ಅಧಿಕಾರಿಗಳೇ ಕಾರಣ ಎಂದು ಆರೋಪಿಸಿದರು. ವಾಸ್ತವವಾಗಿ, ಮ್ಯಾನೇಜ್‌ಮೆಂಟ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಅವರು ಕಾಲೇಜು ಎದುರು ಪ್ರತಿಭಟನೆ ನಡೆಸುತ್ತಿದ್ದಾಗ ಈ ಹೈ ಡ್ರಾಮಾ ನಡೆದಿದೆ.

ನಂತರ ಮೃತ ವಿದ್ಯಾರ್ಥಿಯ ಸಂಬಂಧಿಕರು ಆಕ್ರೋಶಗೊಂಡು ಕಾಲೇಜು ಕಚೇರಿಗೆ ನುಗ್ಗಿದ್ದಾರೆ ಮತ್ತು ಕ್ಯಾಂಟೀನ್‌ನಲ್ಲಿದ್ದ ಉಪಕರಣಗಳನ್ನು ಧ್ವಂಸಗೊಳಿಸಿದ್ದಾರೆ ಎನ್ನಲಾಗಿದೆ. ಮಾಹಿತಿ ಪಡೆದ ಗುಡೂರು ಪೊಲೀಸರು ಸ್ಥಳಕ್ಕೆ ಧಾವಿಸಿ ಆಕ್ರೋಶಗೊಂಡ ಕುಟುಂಬಸ್ಥರನ್ನು ಸಮಾಧಾನಪಡಿಸಿ ಪರಿಸ್ಥಿತಿ ನಿಯಂತ್ರಿಸಿದರು.

ವಿದ್ಯಾರ್ಥಿಯ ಬ್ಯಾಗ್‌ನಿಂದ ಚಾಕುವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಗುಡೂರು ಏರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಕರಣ ದಾಖಲಾಗಿದ್ದು, ಸಾವಿನ ಹಿಂದಿನ ಕಾರಣ ಏನೆಂಬುದು ಇನ್ನೂ ತಿಳಿದುಬಂದಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com