'ತೃಪ್ತಿ ಪಟ್ಟುಕೊಂಡು ಸುಮ್ಮನೆ ಕೂರಬೇಡಿ, ಬಜೆಟ್ ಅನ್ನು ಜನರ ಬಳಿ ಕೊಂಡೊಯ್ಯಿರಿ': ಬಿಜೆಪಿ ಸಂಸದರಿಗೆ ಪ್ರಧಾನಿ ಮೋದಿ ಸಲಹೆ

ಕೆಲಸದ ವಿಚಾರ, ಸಮಾಜಸೇವೆಯಲ್ಲಿ ಆತ್ಮತೃಪ್ತಿ ಪಟ್ಟುಕೊಳ್ಳದೆ ತಳಮಟ್ಟದಲ್ಲಿ ಜನರಿಗೆ ತಲುಪಬೇಕು ಎಂದು ಬಿಜೆಪಿ ಸಂಸದರಿಗೆ ಪ್ರಧಾನಿ ನರೇಂದ್ರ ಮೋದಿ ಕಿವಿಮಾತು ಹೇಳಿದ್ದಾರೆ.
ಪಿಎಂ ನರೇಂದ್ರ ಮೋದಿ
ಪಿಎಂ ನರೇಂದ್ರ ಮೋದಿ

ನವದೆಹಲಿ: ದೆಹಲಿಯಲ್ಲಿ ಬಿಜೆಪಿ ಸಂಸದೀಯ ಪಕ್ಷ ಸಭೆ ನಡೆಯಿತು. ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ಸಚಿವರು, ನಾಯಕರು, ಸಂಸದರು ಭಾಗವಹಿಸಿದ್ದರು. 

ಸಭೆ ಆರಂಭಕ್ಕೆ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಪ್ರಧಾನಿ ನರೇಂದ್ರ ಮೋದಿಯವರಿಗೆ ಹಾರ ಹಾಕಿ ಸನ್ಮಾನಿಸಿದರು. ಇತ್ತೀಚೆಗಷ್ಟೆ ಕೇಂದ್ರ ಬಜೆಟ್ 2023 ಮಂಡನೆಯಾಗಿದ್ದು, ಈ ಬಗ್ಗೆ ಚರ್ಚಿಸಲು ಮತ್ತು ಸಂಸತ್ತಿನಲ್ಲಿ ನಡೆಯುತ್ತಿರುವ ಬಜೆಟ್ ಅಧಿವೇಶನ ಹಿನ್ನೆಲೆಯಲ್ಲಿ ಬಿಜೆಪಿ ಸಂಸದೀಯ ಸಭೆ ಕರೆಯಲಾಗಿದೆ.

ಈ ಸಂದರ್ಭದಲ್ಲಿ ಸಚಿವರು, ಸಂಸದರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕೆಲಸದ ವಿಚಾರ, ಸಮಾಜಸೇವೆಯಲ್ಲಿ ಆತ್ಮತೃಪ್ತಿ ಪಟ್ಟುಕೊಳ್ಳದೆ ತಳಮಟ್ಟದಲ್ಲಿ ಜನರಿಗೆ ತಲುಪಬೇಕು ಎಂದು ಬಿಜೆಪಿ ಸಂಸದರಿಗೆ ಪ್ರಧಾನಿ ನರೇಂದ್ರ ಮೋದಿ ಕಿವಿಮಾತು ಹೇಳಿದ್ದಾರೆ.

ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ತಮ್ಮ ಸರ್ಕಾರ ಉತ್ತಮ ಬಜೆಟ್ ನೀಡಲು ಪ್ರಯತ್ನಿಸಿತು. ಇದಕ್ಕೆ ಎಲ್ಲರು ಸಹಕಾರ ನೀಡಿದ್ದಾರೆ ಎಂದು ಶ್ಲಾಘಿಸಿದರು.ಬಜೆಟ್ ಎಂದರೆ ಸಮಾಜದ ಪ್ರತಿಯೊಂದು ಶ್ರೇಣಿಯನ್ನು ತಲುಪಬೇಕು. ಈ ಬಾರಿ ಮಂಡಿಸಿರುವ ಬಜೆಟ್ ನ್ನು ಜನರ ಬಳಿಗೆ ತೆಗೆದುಕೊಂಡು ಹೋಗುವಂತೆ ಇದೇ ಸಂದರ್ಭದಲ್ಲಿ ಸಂಸದರಿಗೆ ಪ್ರಧಾನಿ ಸೂಚಿಸಿದರು.

ತಮ್ಮ ತಮ್ಮ ಕ್ಷೇತ್ರಗಳಲ್ಲಿ ಬಜೆಟ್ ಬಗ್ಗೆ ಮಾತನಾಡುವುದು, ಜನರಿಗೆ ತಲುಪಿಸುವುದು ಸಂಸದರ ಜವಾಬ್ದಾರಿಯಾಗಿದೆ. ಜನರಿಗೆ ಬಜೆಟ್ ನಲ್ಲಿ ಏನಿದೆ, ಜಗತ್ತು ಆರ್ಥಿಕ ಅನಿಶ್ಚಿತತೆ ಎದುರಿಸುವಾಗ ಬಜೆಟ್ ನಲ್ಲಿ ಜನರಿಗೆ ಏನು ಕೊಡಲಾಗಿದೆ ಎಂಬುದನ್ನು ತೋರಿಸಬೇಕು ಎಂದರು.

ಯುವಕರನ್ನು ಉತ್ತೇಜಿಸಲು ಅವರು ಹೆಚ್ಚೆಚ್ಚು ಸ್ಪರ್ಧೆಗಳು ಮತ್ತು ಕ್ರೀಡೆಗಳಲ್ಲಿ ಭಾಗವಹಿಸುವಂತೆ ಮಾಡಲು ಹಲವು ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಮತ್ತು ಗಡಿ ಜಿಲ್ಲೆಗಳ ಜನರನ್ನು ತಲುಪುವಂತೆ ಸಂಸದರಿಗೆ ಸಲಹೆ ನೀಡಿದರು.

2014 ಮತ್ತು 2019ರಲ್ಲಿ ಬಿಜೆಪಿಗೆ ಬಹುಮತ ಸಿಕ್ಕಿ ಅಧಿಕಾರಕ್ಕೆ ಬರಲು ಸಾಧ್ಯವಾಯಿತಾದರೂ ಅಷ್ಟಕ್ಕೇ ತೃಪ್ತಿಪಟ್ಟುಕೊಳ್ಳಬಾರದು, ಇನ್ನಷ್ಟು ಕೆಲಸ ಮಾಡಿ ಜನರಿಗೆ ಹತ್ತಿರವಾಗಬೇಕು ಎಂದರು.

ಜನವರಿ 31ರಂದು ಕೇಂದ್ರ ಬಜೆಟ್ ಅಧಿವೇಶನ ಆರಂಭವಾಗಿದ್ದು ರಾಷ್ಟ್ರಪತಿ ದ್ರೌಪದಿ ಮುರ್ಮು ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದರು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು 2023-24ನೇ ಸಾಲಿನ ಬಜೆಟ್ ಮಂಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com