ಭೋಪಾಲ್: ಜನಸಾಮಾನ್ಯರಿಗೆ ಅಭಿವೃದ್ಧಿ ಮಂತ್ರವನ್ನು ಹರಡುವ ಉದ್ದೇಶದಿಂದ ಬಿಜೆಪಿ ಸರ್ಕಾರದ ರಾಜ್ಯವ್ಯಾಪಿ ವಿಕಾಸ ಯಾತ್ರೆಯು ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯಲ್ಲಿ ನಡೆಯುತ್ತಿದ್ದು, ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಮಹಾತ್ಮ ಗಾಂಧಿಯವರ ಕೊಡುಗೆಯನ್ನು ಕಡಿಮೆ ಮಾಡುವ ಕವಿತೆಯನ್ನು ವಾಚನ ಮಾಡುವ ಮೂಲಕ ಹೊಸ ವಿವಾದಕ್ಕೆ ಸಿಲುಕಿದೆ.
ಆ ದಿನದ ವಿಕಾಸ್ ಯಾತ್ರೆಯು ಸಿಯೋನಿ ಪಟ್ಟಣದ ಶಾಲೆಯಲ್ಲಿ ಮುಕ್ತಾಯಗೊಂಡ ನಂತರ ಸೋಮವಾರ ಸಿಎಂ ರೈಸ್ ಸ್ಕೂಲ್‌ನಲ್ಲಿ ವಿವಾದಾತ್ಮಕ ಘಟನೆ ನಡೆದಿದೆ ಎಂದು ವರದಿಯಾಗಿದೆ. ಈ ವೇಳೆ ಶಾಲೆಯ ವಿದ್ಯಾರ್ಥಿಯೊಬ್ಬರು ಕವಿತೆಯನ್ನು ವಾಚಿಸಿದ್ದು, ಅದರಲ್ಲಿ ಅನೇಕ ಸಾಲುಗಳು ಮಹಾತ್ಮ ಗಾಂಧಿಯವರ ಕೊಡುಗೆಯನ್ನು ಕಡಿಮೆ ಮಾಡಿವೆ ಎನ್ನಲಾಗಿದೆ.
ಸ್ಥಳೀಯ ಶಾಸಕ ದಿನೇಶ್ ರೈ ಮುನ್ಮುನ್ ಮತ್ತು ಸರ್ಕಾರಿ ಅಧಿಕಾರಿಗಳು ಸೇರಿದಂತೆ ಆಡಳಿತಾರೂಢ ಬಿಜೆಪಿ ನಾಯಕರ ಸಮ್ಮುಖದಲ್ಲಿ ಬಾಲಕ ಕವಿತೆಯನ್ನು ವಾಚಿಸಿದ್ದು, ವಿದ್ಯಾರ್ಥಿಯು ಮೆಚ್ಚುಗೆ ಗಳಿಸಿದ ವಿಡಿಯೋ ವೈರಲ್ ಆಗಿದೆ.
'ಮಹಾತ್ಮ ಗಾಂಧೀಜಿಯನ್ನು ಅಪಹಾಸ್ಯ ಮಾಡುವುದನ್ನು ಕ್ಷಮಿಸಲು ಸಾಧ್ಯವಿಲ್ಲ. ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ಗಾಂಧೀಜಿ ಬಗ್ಗೆ ಯಾವತ್ತೂ ಗೌರವವಿಲ್ಲ. ಕವಿತೆ ಓದಿದ ಶಾಲಾ ವಿದ್ಯಾರ್ಥಿಯ ತಪ್ಪಲ್ಲ, ಆ ಕವಿತೆಯನ್ನು ಹೇಳಲು ಕಲಿಸಿದವರ ತಪ್ಪು. ಸ್ಥಳೀಯ ಬಿಜೆಪಿ ಶಾಸಕ ಮತ್ತು ಅವರ ಪಕ್ಷವು ಈ ವಿಷಯದಲ್ಲಿ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ಏಕೆಂದರೆ, ಶಾಸಕರು ಬಾಲಕನನ್ನು ಹೊಗಳುತ್ತಿದ್ದಾರೆ ಮತ್ತು ಕವಿತೆಗೆ ಬಹುಮಾನ ನೀಡಲು ಪ್ರಯತ್ನಿಸುತ್ತಿದ್ದಾರೆ ಎಂಬುದನ್ನು ವಿಡಿಯೋದಲ್ಲಿ ಸ್ಪಷ್ಟವಾಗಿ ತೋರಿಸಲಾಗಿದೆ' ಎಂದು ಸಿಯೋನಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಜ್ ಕುಮಾರ್ ಖುರಾನಾ ಹೇಳಿದ್ದಾರೆ.
ವಿವಾದಕ್ಕೆ ತೆರೆ ಎಳೆಯಲು ಪ್ರಯತ್ನಿಸಿದ ಶಾಸಕ ದಿನೇಶ್ ರೈ ಮುನ್ಮುನ್, ವಿದ್ಯಾರ್ಥಿ ಹೇಳಿದ ಕವಿತೆಯನ್ನು ಗಂಭೀರವಾಗಿ ತೆಗೆದುಕೊಳ್ಳಬಾರದು. ಕಾಂಗ್ರೆಸ್ ರಾಜಕೀಯದಿಂದ ದೂರವಿರಬೇಕು ಎಂದಿದ್ದಾರೆ.
ಆದಾಗ್ಯೂ, ಸಿಯೋನಿ ಜಿಲ್ಲಾ ಶಿಕ್ಷಣಾಧಿಕಾರಿ ಮಾತನಾಡಿ, 'ವಿದ್ಯಾರ್ಥಿಯನ್ನು ಕರೆತಂದ ಶಿಕ್ಷಕರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಮತ್ತು ಅಂತಹ ಜನರ ಬಗ್ಗೆ ಆಕ್ಷೇಪಾರ್ಹವಾಗಿ ಏನೂ ಮಾತನಾಡದಂತೆ ನೋಡಿಕೊಳ್ಳಲು ಎಲ್ಲಾ ಶಾಲೆಯ ಪ್ರಾಂಶುಪಾಲರಿಗೆ ಸೂಚಿಸಲಾಗಿದೆ' ಎಂದು ಹೇಳಿದರು.
Advertisement