ಹಳೆಯ ಬಜೆಟ್ ಓದಿ ನಗೆಪಾಟಲಿಗೆ ಗುರಿಯಾದ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್: ಸದನದಲ್ಲಿ ಗದ್ದಲ ಕೋಲಾಹಲ

ರಾಜ್ಯಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ತಮ್ಮ ಮೂರನೇ ಅವಧಿಯ ಕೊನೆಯ ಬಜೆಟ್​ ಅನ್ನು ಮಂಡಿಸಬೇಕಿತ್ತು, ಆದರೆ ವಿಧಾನಸಭೆಯಲ್ಲಿ ಹಳೆಯ ಬಜೆಟ್​ ಓದಿ ನಗೆಪಾಟಲಿಗೆ ಗುರಿಯಾದರು.
ಅಶೋಕ್ ಗೆಹ್ಲೋಟ್
ಅಶೋಕ್ ಗೆಹ್ಲೋಟ್

ಜೈಪುರ: ರಾಜ್ಯಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ತಮ್ಮ ಮೂರನೇ ಅವಧಿಯ ಕೊನೆಯ ಬಜೆಟ್​ ಅನ್ನು ಮಂಡಿಸಬೇಕಿತ್ತು, ಆದರೆ ವಿಧಾನಸಭೆಯಲ್ಲಿ ಹಳೆಯ ಬಜೆಟ್​ ಓದಿ ನಗೆಪಾಟಲಿಗೆ ಗುರಿಯಾದರು.

ಮೊದಲ ಬಾರಿಗೆ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳಲ್ಲಿ ಬಜೆಟ್ ಅನ್ನು ನೇರಪ್ರಸಾರ ಮಾಡಲಾಗುತ್ತಿತ್ತು. ರಾಜ್ಯದ ಜನಸಂಖ್ಯೆಯ ಶೇಕಡಾ 4 ರಷ್ಟಿರುವ ರಾಜ್ಯದ ಯುವಜನರ ಮತವನ್ನು ಗುರಿಯಾಗಿಟ್ಟುಕೊಂಡು ಗೆಹ್ಲೋಟ್ ಸರ್ಕಾರವು ಎಲ್ಲಾ ಕಾಲೇಜುಗಳಿಗೆ ಬಜೆಟ್ ಅನ್ನು ನೇರಪ್ರಸಾರ ಮಾಡಲು ವ್ಯವಸ್ಥೆ ಮಾಡಲು ಸುತ್ತೋಲೆ ಹೊರಡಿಸಿತ್ತು.

ಮೊದಲ 8-10 ನಿಮಿಷಗಳ ಕಾಲ, ಮುಖ್ಯಮಂತ್ರಿ ಅವರು ಹಳೆಯ ಬಜೆಟ್ ಅನ್ನು ಓದುತ್ತಿದ್ದಾರೆಂದು ತಿಳಿದಿರಲಿಲ್ಲ.  ಮುಖ್ಯ ಸಚೇತಕ ಮಹೇಶ್ ಜೋಶಿ ಅವರು ಪ್ರಮಾದವನ್ನು ತೋರಿಸಲು ಮುಂದಾದರು. ಸದನದ ಅಧಿಕಾರಿಗಳ ಗ್ಯಾಲರಿಯಲ್ಲಿ ಕುಳಿತಿದ್ದ ಉನ್ನತ ಹಣಕಾಸು ಅಧಿಕಾರಿಗಳು ಅವ್ಯವಸ್ಥೆ ಕುರಿತು ಮುಖ್ಯ ಸಚೇತಕರಿಗೆ ಮಾಹಿತಿ ನೀಡಿದರು.

ತಕ್ಷಣ ದಿನಾಂಕ ನೋಡಿದ ಸಿಎಂ ಶಾಕ್ ಆಗಿದ್ದಾರೆ. ಬಜೆಟ್​ ಸೋರಿಕೆಯಾಗಿದೆ ಎಂದು ಈಗಾಗಲೇ ದಾಳಿ ನಡೆಸುತ್ತಿರುವ ಬಿಜೆಪಿ ಗದ್ದಲವನ್ನು ತೀವ್ರಗೊಳಿಸಿದರು. ಸ್ಪೀಕರ್ ಸಿಪಿ ಜೋಶಿ ಅವರು ಸುವ್ಯವಸ್ಥೆ ಕಾಪಾಡುವಂತೆ ಕೇಳಿಕೊಂಡರೂ ಪ್ರತಿಪಕ್ಷಗಳು ಗದ್ದಲ ಮುಂದುವರಿಸಿದ್ದರಿಂದ ಸದನವನ್ನು ಅರ್ಧ ಗಂಟೆ ಮುಂದೂಡಲಾಯಿತು. ಕಲಾಪ ಮುಂದೂಡಿದ ನಂತರ ಬಿಜೆಪಿ ಶಾಸಕರು ಸದನದ ಬಾವಿಯೊಳಗೆ ಧರಣಿ ನಡೆಸಿದರು.

ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಅವರು ವೀಡಿಯೋ ಕ್ಲಿಪ್ ಬಿಡುಗಡೆ ಮಾಡಿ, “ಹಳೆಯ ಬಜೆಟ್ ಅನ್ನು 8 ನಿಮಿಷ ಓದುವ ಸಿಎಂ ಕೈಯಲ್ಲಿ ರಾಜ್ಯ ಎಷ್ಟು ಸುರಕ್ಷಿತವಾಗಿರುತ್ತದೆ, ಅದು ಕಳೆದ ವರ್ಷದ್ದು ಎಂದು ತಿಳಿಯದೇ” ಎಂದು  ವ್ಯಂಗ್ಯವಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com