ಕಾರಿನಲ್ಲಿ ಸುಟ್ಟು ಕರಕಲಾದ ಇಬ್ಬರು ಮುಸ್ಲಿಂ ವ್ಯಕ್ತಿಗಳು: ಆರು ಮಂದಿಯನ್ನು ವಶಕ್ಕೆ ಪಡೆದ ರಾಜಸ್ಥಾನ ಪೊಲೀಸರು

ಹರಿಯಾಣದಲ್ಲಿ ಇಬ್ಬರು ಮುಸ್ಲಿಂ ಪುರುಷರ ಸಾವಿಗೆ ಸಂಬಂಧಿಸಿದಂತೆ ಆರು ಮಂದಿಯನ್ನು ವಿಚಾರಣೆಗಾಗಿ ಬಂಧಿಸಲಾಗಿದೆ. ಅವರಿಬ್ಬರನ್ನು ಗೋರಕ್ಷಕರು ಅಪಹರಿಸಿದ್ದಾರೆ ಎನ್ನುವ ಆರೋಪ ಕೇಳಿಬಂದ ನಂತರ ಅವರ ಶವಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಬ್ಬರು ವ್ಯಕ್ತಿಗಳು ಸಜೀವ ದಹನಗೊಂಡ ಕಾರು
ಇಬ್ಬರು ವ್ಯಕ್ತಿಗಳು ಸಜೀವ ದಹನಗೊಂಡ ಕಾರು

ಜೈಪುರ: ಹರಿಯಾಣದಲ್ಲಿ ಇಬ್ಬರು ಮುಸ್ಲಿಂ ಪುರುಷರ ಸಾವಿಗೆ ಸಂಬಂಧಿಸಿದಂತೆ ಆರು ಮಂದಿಯನ್ನು ವಿಚಾರಣೆಗಾಗಿ ಬಂಧಿಸಲಾಗಿದೆ. ಅವರಿಬ್ಬರನ್ನು ಗೋರಕ್ಷಕರು ಅಪಹರಿಸಿದ್ದಾರೆ ಎನ್ನುವ ಆರೋಪ ಕೇಳಿಬಂದ ನಂತರ ಅವರ ಶವಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದು ಗೋರಕ್ಷಕರ ಪ್ರಕರಣವೇ ಅಥವಾ ಇಲ್ಲವೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಘಟನೆಯನ್ನು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಖಂಡಿಸಿದ್ದು, ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

ರಾಜಸ್ಥಾನದ ಭರತ್‌ಪುರ ಜಿಲ್ಲೆಯ ಘಾಟ್ಮೀಕಾ ಗ್ರಾಮದ ನಿವಾಸಿಗಳಾದ ನಾಸಿರ್ (25) ಮತ್ತು ಜುನೈದ್ ಅಲಿಯಾಸ್ ಜುನಾ (35) ಎಂಬುವವರನ್ನು ಬುಧವಾರ ಅಪಹರಿಸಲಾಗಿದ್ದು, ಗುರುವಾರ ಬೆಳಗ್ಗೆ ಭಿವಾನಿಯ ಲೋಹರು ಎಂಬಲ್ಲಿ ಸುಟ್ಟ ಕಾರಿನೊಳಗೆ ಸುಟ್ಟು ಕರಕಲಾದ ರೀತಿಯಲ್ಲಿ ಅವರ ಶವಗಳು ಪತ್ತೆಯಾಗಿವೆ.

ಇಬ್ಬರನ್ನು ಅಪಹರಿಸಿದವರು ಬಜರಂಗದಳದವರು ಎಂದು ಮೃತರ ಕುಟುಂಬಸ್ಥರು ಪೊಲೀಸ್ ದೂರಿನಲ್ಲಿ ಆರೋಪಿಸಿದ್ದಾರೆ.

ಈ ಸಂಬಂಧ ಆರು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಎಫ್‌ಐಆರ್‌ನಲ್ಲಿ ಹೆಸರಿಸಲಾದವರು ಬಜರಂಗದಳದೊಂದಿಗೆ ಸಂಬಂಧ ಹೊಂದಿದ್ದಾರೆ. ಆದರೆ, ಅವರು ಅಪರಾಧದಲ್ಲಿ ಭಾಗಿಯಾಗಿದ್ದಾರೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ಖಚಿತವಾಗಿಲ್ಲ ಎಂದು ಭರತ್‌ಪುರ ಶ್ರೇಣಿಯ ಪೊಲೀಸ್ ಮಹಾನಿರೀಕ್ಷಕ ಗೌರವ್ ಶ್ರೀವಾಸ್ತವ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದರು.

ಜುನೈದ್ ಗೋವು ಕಳ್ಳಸಾಗಣೆಯಲ್ಲಿ ಈ ಹಿಂದೆ ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿದ್ದಾನೆ ಎಂದು ಅಧಿಕಾರಿ ಹೇಳಿದ್ದು, ಆತನ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಐದು ಪ್ರಕರಣಗಳು ದಾಖಲಾಗಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಸಂತ್ರಸ್ತರ ಕುಟುಂಬಸ್ಥರು ನೀಡಿದ ದೂರಿನ ಆಧಾರದ ಮೇಲೆ ಅನಿಲ್, ಶ್ರೀಕಾಂತ್, ರಿಂಕ್ ಸೈನಿ, ಲೋಕೇಶ್ ಸಿಂಘ್ಲಾ ಮತ್ತು ಮೋನು ಎಂಬ ಐದು ಜನರ ವಿರುದ್ಧ ಗೋಪಾಲ್‌ಗಢ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಭರತ್‌ಪುರದ ಪೊಲೀಸ್ ವರಿಷ್ಠಾಧಿಕಾರಿ ಶ್ಯಾಮ್ ಸಿಂಗ್ ತಿಳಿಸಿದ್ದಾರೆ. ಆರೋಪಿಗಳ ಪತ್ತೆಗೆ ತಂಡಗಳನ್ನು ರಚಿಸಲಾಗಿದೆ.

ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 143 (ಕಾನೂನುಬಾಹಿರ ಸಭೆ), 365 (ಅಪಹರಣ), 367 (ಅಪಹರಣದ ನಂತರ ತೀವ್ರವಾಗಿ ಗಾಯಗೊಳಿಸುವುದು) ಮತ್ತು 368 (ತಪ್ಪಾಗಿ ಬಂಧನದಲ್ಲಿ ಇಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com