ಚುನಾವಣಾ ಆಯೋಗ 'ಬಿಜೆಪಿಯ ಗುಲಾಮ', ದೇಶದಲ್ಲಿ ಪ್ರಜಾಪ್ರಭುತ್ವ ಉಳಿದಿಲ್ಲ: ಉದ್ಧವ್ ಠಾಕ್ರೆ

ಚುನಾವಣಾ ಆಯೋಗ "ಆಡಳಿತ ಪಕ್ಷದ ಗುಲಾಮ" ನಂತೆ ಕೆಲಸ ಮಾಡುತ್ತಿದೆ ಮತ್ತು ದೇಶ ಸರ್ವಾಧಿಕಾರದ ಕಡೆಗೆ ಸಾಗುತ್ತಿದೆ ಎಂದು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಶನಿವಾರ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ...
ಉದ್ಧವ್ ಠಾಕ್ರೆ
ಉದ್ಧವ್ ಠಾಕ್ರೆ

ಮುಂಬೈ: ಚುನಾವಣಾ ಆಯೋಗ "ಆಡಳಿತ ಪಕ್ಷದ ಗುಲಾಮ" ನಂತೆ ಕೆಲಸ ಮಾಡುತ್ತಿದೆ ಮತ್ತು ದೇಶ ಸರ್ವಾಧಿಕಾರದ ಕಡೆಗೆ ಸಾಗುತ್ತಿದೆ ಎಂದು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಶನಿವಾರ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಚುನಾವಣಾ ಆಯೋಗ ಶುಕ್ರವಾರ ಶಿವಸೇನೆಯ ಮೂಲ ಚಿಹ್ನೆಯಾದ 'ಬಿಲ್ಲು ಬಾಣ'ವನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣಕ್ಕೆ ನೀಡುವ ಮೂಲಕ ಉದ್ಧವ್ ಠಾಕ್ರೆ ಬಣಕ್ಕೆ ಶಾಕ್ ನೀಡಿದೆ.

ಆಯೋಗದ ನಿರ್ಧಾರಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಉದ್ಧವ್ ಠಾಕ್ರೆ ಅವರು, ಚುನಾವಣಾ ಆಯೋಗ ಶಿವಸೇನೆಯ ತಮ್ಮ ಪ್ರತಿಸ್ಪರ್ಧಿ ಬಣಗಳ ಪರವಾಗಿ ಮೊದಲೇ ನಿರ್ಧಾರಗಳನ್ನು ತೆಗೆದುಕೊಂಡಿದ್ದರೆ, "ಅವರು ಅಫಿಡವಿಟ್‌ಗಳು ಮತ್ತು ಇತರೆ ದಾಖಲೆಗಳನ್ನು ಸಲ್ಲಿಸಲು ಹೇಳಿ, ವಿಚಾರಣೆಯ ಪ್ರಹಸನ ಮಾಡಿದ್ದು ಏಕೆ?" ಎಂದು ಪ್ರಶ್ನಿಸಿದರು.

"ಶುಕ್ರವಾರ ಸಂಜೆ ಅಪ್‌ಲೋಡ್ ಆಗಿರುವ ಚುನಾವಣಾ ಆಯೋಗದ ಆದೇಶಕ್ಕೂ ಮುನ್ನವೇ ಬಿಜೆಪಿ ನಾಯಕ ಮತ್ತು ಕೇಂದ್ರ ಸಚಿವರು ಹಾಗೂ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಕೂಡ ಶಿಂಧೆ ಪರವಾಗಿ ಚುನಾವಣಾ ಆಯೋಗ ಆದೇಶ ನೀಡಲಿದೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದರು. ಆದರೆ ಚುನಾವಣಾ ಆಯೋಗದ ಆದೇಶಕ್ಕೂ ಮುನ್ನ ಇಸಿ ನಿರ್ಧಾರ ಗೊತ್ತಾಗಿದ್ದು ಹೇಗೆ?, ಇದು ಬಿಜೆಪಿ ಎಲ್ಲಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂಬುದನ್ನು ತೋರಿಸುತ್ತದೆ. ಚುನಾವಣಾ ಆಯೋಗ ಗುಲಾಮನಂತೆ ವರ್ತಿಸುತ್ತಿದೆ ಮತ್ತು ತಮ್ಮ ರಾಜಕೀಯ ನಾಯಕರ ಆದೇಶದ ಮೇರೆಗೆ ಹಸುವಿನ ಸಗಣಿ ತಿನ್ನುತ್ತಿದೆ ಎಂದು ಉದ್ಧವ್ ಠಾಕ್ರೆ ಕಿಡಿಕಾರಿದ್ದಾರೆ.

16 ಶಿವಸೇನೆಯ ಶಾಸಕರ ಅನರ್ಹತೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತನ್ನ ಅಂತಿಮ ಆದೇಶವನ್ನು ಹೊರಡಿಸುವವರೆಗೆ ಚಿಹ್ನೆ ಬಗ್ಗೆ ಅಂತಿಮ ಆದೇಶ ನೀಡದಂತೆ ನಾವು ಇಸಿಗೆ ಮನವಿ ಮಾಡಿದ್ದೇವೆ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.

"ಆದರೆ ಚುನಾವಣಾ ಆಯೋಗವು ಆತುರದಲ್ಲಿರುವಂತೆ ತೋರುತ್ತಿದೆ. ಅವರಿಗೆ ಯಾವ ಒತ್ತಡ ಇತ್ತೋ ಗೊತ್ತಿಲ್ಲ.  ಉಪಚುನಾವಣೆಗಳು ನಡೆಯುತ್ತಿವೆ ಮತ್ತು ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಇಂತಹ ಸಂದರ್ಭದಲ್ಲಿ ಚುನಾವಣಾ ಆಯೋಗ ತರಾತುರಿಯಲ್ಲಿ ಆದೇಶ ಪ್ರಕಟಿಸಿದ್ದು ಅತ್ಯಂತ ದುರದೃಷ್ಟಕರ. ಈ ಹಿಂದೆ ಸ್ವತಂತ್ರ ಸಂಸ್ಥೆಗಳೆಂದು ಕರೆಯಲಾಗುತ್ತಿದ್ದ ಒಂದೊಂದೇ ಸಂಸ್ಥೆಗಳನ್ನು ಬಿಜೆಪಿ ಹಾಳು ಮಾಡುತ್ತಿದೆ. ಭಾರತದಲ್ಲಿ ಏನಾಗುತ್ತಿದೆ ಎಂಬುದನ್ನು ಇಡೀ ವಿಶ್ವವೇ ಗಮನಿಸುತ್ತಿದೆ ಎಂದು ಠಾಕ್ರೆ ವಾಗ್ದಾಳಿ ನಡೆಸಿದ್ದಾರೆ.

ಭಾರತ ಸ್ವಾತಂತ್ರ್ಯದ 75ನೇ ವರ್ಷವನ್ನು ಆಚರಿಸುತ್ತಿದೆ. ಆದರೆ ದೇಶದಲ್ಲಿ ನಡೆಯುತ್ತಿರುವುದು ಮಾತ್ರ ತುಂಬಾ ನಾಚಿಕೆಗೇಡಿನ ಸಂಗತಿ ಎಂದಿದ್ದಾರೆ.

ದೇಶದಲ್ಲಿ ಇನ್ನು ಪ್ರಜಾಪ್ರಭುತ್ವ ಉಳಿದಿಲ್ಲ. ಎಲ್ಲವನ್ನೂ ಹುಕ್ ಅಥವಾ ಕ್ರೂಕ್ ಮೂಲಕ ನಿಯಂತ್ರಣಕ್ಕೆ ತೆಗೆದುಕೊಳ್ಳಲಾಗುತ್ತಿದೆ. ಭಾರತೀಯ ನ್ಯಾಯಾಂಗವು ನಮ್ಮ ದೇಶದ ಭರವಸೆಯ ಕೊನೆಯ ಆಶಾ ಕಿರಣವಾಗಿದೆ. ಇಂದಿರಾ ಗಾಂಧಿ ಕನಿಷ್ಠ ತುರ್ತು ಪರಿಸ್ಥಿತಿಯನ್ನು ಘೋಷಿಸಿ ತಮ್ಮ ನಡವಳಿಕೆಯಲ್ಲಿ ಪ್ರಾಮಾಣಿಕರಾಗಿದ್ದರು. ಆದರೆ ಇಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸದೆ, ಎಲ್ಲಾ ತುರ್ತು ಪರಿಸ್ಥಿತಿಗಳನ್ನು ಅನುಸರಿಸಲಾಗುತ್ತಿದೆ ಮತ್ತು ಜಾರಿಗೊಳಿಸಲಾಗುತ್ತಿದೆ. ಆದರೆ ನಾವು ಜನತಾ ನ್ಯಾಯಾಲಯಕ್ಕೆ ಹೋಗುತ್ತೇವೆ ಮತ್ತು ಅವರ ಬೆಂಬಲವನ್ನು ಪಡೆಯುತ್ತೇವೆ. 1960ರ ದಶಕದಲ್ಲಿ ನನ್ನ ತಂದೆಯಂತೆ ಶಿವಸೇನೆಯನ್ನು ಕಟ್ಟುತ್ತೇವೆ’’ಎಂದು ಠಾಕ್ರೆ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com