ಗುವಾಹಟಿ: ನಾನು ಗೌಮಾಂಸ ತಿನ್ನುತ್ತೇನೆ ಮತ್ತು ಬಿಜೆಪಿಯಲ್ಲೇ ಇದ್ದೇನೆ. ಗೋಮಾಂಸ ತಿನ್ನುವುದರಿಂದ ಯಾವುದೇ ಸಮಸ್ಯೆ ಇಲ್ಲ ಎಂದು ಮೇಘಾಲಯ ಬಿಜೆಪಿ ಅಧ್ಯಕ್ಷ ಅರ್ನೆಸ್ಟ್ ಮಾವ್ರಿ ಅವರು ಹೇಳಿದ್ದಾರೆ.
ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಒಂಬತ್ತು ವರ್ಷಗಳಾಗಿದ್ದು, ದೇಶದಲ್ಲಿ ಯಾವುದೇ ಚರ್ಚ್ ದಾಳಿಗೆ ಒಳಗಾಗಿರುವುದನ್ನು ನಾವು ನೋಡಿಲ್ಲ ಎಂದು ಮೇಘಾಲಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಐಎಎನ್ಎಸ್ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಕೇಂದ್ರ ಸರ್ಕಾರ ಗೋಮಾಂಸ ಸೇವನೆಗೂ ಯಾವುದೇ ನಿರ್ಬಂಧ ವಿಧಿಸಿಲ್ಲ. ನಾನು ಗೋಮಾಂಸ ತಿನ್ನುತ್ತೇನೆ. ಮತ್ತು ಬಿಜೆಪಿಯಲ್ಲೇ ಇದ್ದೇನೆ. ಇದರಿಂದ ಯಾವುದೇ ಸಮಸ್ಯೆಯಾಗಿಲ್ಲ ಎಂದು ಮೇಘಾಲಯ ಬಿಜೆಪಿ ಅಧ್ಯಕ್ಷರು ಹೇಳಿದ್ದಾರೆ.
ಶೇಕಡ 90ರಷ್ಟು ಕ್ರೈಸ್ತರು ಇರುವ ಮೇಘಾಲಯದಂತಹ ರಾಜ್ಯದಲ್ಲಿ ಜನರು ಗೋಮಾಂಸ ನಿಷೇಧ, ಸಿಎಎ ಮತ್ತು ಇತರ ವಿಷಯಗಳಲ್ಲಿ ಬಿಜೆಪಿಯ ಕಠಿಣ ನಿಲುವುಗಳನ್ನು ಒಪ್ಪಿಕೊಳ್ಳಲು ಸಿದ್ಧರಾಗಿದ್ದಾರೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಮಾವ್ರಿ, ಮೇಘಾಲಯದ ಜನತೆ ಈ ಬಾರಿ ಬಿಜೆಪಿ ಜೊತೆಗಿದ್ದಾರೆ. ಅದನ್ನು ಮಾರ್ಚ್ 2 ರಂದು ಎಲ್ಲರೂ ನೋಡಲಿದ್ದಾರೆ’ ಎಂದು ಹೇಳಿದ್ದಾರೆ.
ಮೇಘಾಲಯ ವಿಧಾನಸಭೆಗೆ ಫೆಬ್ರುವರಿ 27ರಂದು ಮತದಾನ ನಡೆಯಲಿದೆ. ಮಾರ್ಚ್ 2ರಂದು ಫಲಿತಾಂಶ ಹೊರ ಬೀಳಲಿದೆ. ರಾಜ್ಯದಲ್ಲಿ ಬಿಜೆಪಿಯು ಎನ್‌ಪಿಪಿಯೊಂದಿಗೆ ಮೈತ್ರಿಯನ್ನು ಕಡಿದುಕೊಂಡಿದ್ದು, 60 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಿದೆ.
Advertisement