ಛತ್ತೀಸ್‍ಗಢ ಕಾಂಗ್ರೆಸ್ ನಾಯಕರ ಮನೆಗಳ ಮೇಲೆ ಇಡಿ ದಾಳಿ: ನಮ್ಮ ನೈತಿಕ ಸ್ಥೈರ್ಯ ಕುಗ್ಗುವುದಿಲ್ಲ ಎಂದ ಸಿಎಂ ಬಘೇಲ್

ಕಲ್ಲಿದ್ದಲು ಸುಂಕ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸೋಮವಾರ ಛತ್ತೀಸ್‌ಗಢದ ಹಲವು ಸ್ಥಳಗಳಲ್ಲಿ ಶೋಧ ನಡೆಸಿದ್ದು, ದಾಳಿ ನಡೆಸುತ್ತಿರುವ ಕೆಲವು ಸ್ಥಳಗಳು ಕಾಂಗ್ರೆಸ್ ಶಾಸಕರು ಹಾಗೂ  ರಾಜ್ಯ ಪಕ್ಷದ ಖಜಾಂಚಿ ಸೇರಿದಂತೆ ಪದಾಧಿಕಾರಿಗಳಿಗೆ ಸಂಬಂಧಿಸಿವೆ ಎಂದು ಮೂಲಗಳು ತಿಳಿಸಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ರಾಯ್ಪುರ: ಕಲ್ಲಿದ್ದಲು ಸುಂಕ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸೋಮವಾರ ಛತ್ತೀಸ್‌ಗಢದ ಹಲವು ಸ್ಥಳಗಳಲ್ಲಿ ಶೋಧ ನಡೆಸಿದ್ದು, ದಾಳಿ ನಡೆಸುತ್ತಿರುವ ಕೆಲವು ಸ್ಥಳಗಳು ಕಾಂಗ್ರೆಸ್ ಶಾಸಕರು ಹಾಗೂ  ರಾಜ್ಯ ಪಕ್ಷದ ಖಜಾಂಚಿ ಸೇರಿದಂತೆ ಪದಾಧಿಕಾರಿಗಳಿಗೆ ಸಂಬಂಧಿಸಿವೆ ಎಂದು ಮೂಲಗಳು ತಿಳಿಸಿವೆ.

ರಾಯ್‌ಪುರದಲ್ಲಿ ಫೆಬ್ರವರಿ 24-26 ರವರೆಗೆ ಮೂರು ದಿನಗಳ ಕಾಂಗ್ರೆಸ್ ಪಕ್ಷದ ಸರ್ವಸದಸ್ಯರ ಅಧಿವೇಶನ ನಡೆಯಲಿದ್ದು, ಇದಕ್ಕೂ ಮೊದಲು ಕಾಂಗ್ರೆಸ್ ನಾಯಕರ ಮನೆಗಳ ಮೇಲೆ ಇಡಿ ದಾಳಿ ನಡೆಸಿದೆ,

ಮೂಲಗಳ ಪ್ರಕಾರ, ಇಡಿ ದಾಳಿ ನಡೆಸಿರುವ ಎಲ್ಲಾ ಸ್ಥಳಗಳು ಛತ್ತೀಸ್‌ಗಢ ಸಿಎಂ ಭೂಪೇಶ್ ಬಘೇಲ್ ಅವರ ಆಪ್ತರಾದ ಶಾಸಕರು ಮತ್ತು ಪದಾಧಿಕಾರಿಗಳಿಗೆ ಸೇರಿವೆ ಎಂದು ತಿಳಿದುಬಂದಿದೆ.

ಭಿಲಾಯ್ (ದುರ್ಗ ಜಿಲ್ಲೆ) ನಲ್ಲಿರುವ ಶಾಸಕ ದೇವೇಂದ್ರ ಯಾದವ್, ಛತ್ತೀಸ್‌ಗಢ ಪ್ರದೇಶ ಕಾಂಗ್ರೆಸ್ ಸಮಿತಿಯ ಖಜಾಂಚಿ ರಾಮಗೋಪಾಲ್ ಅಗರವಾಲ್, ಛತ್ತೀಸ್‌ಗಢ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಅಧ್ಯಕ್ಷ ಸುಶೀಲ್ ಸನ್ನಿ ಅಗರವಾಲ್ ಮತ್ತು ಪಕ್ಷದ ರಾಜ್ಯ ವಕ್ತಾರ ಆರ್‌ಪಿ ಸಿಂಗ್'ಗೆ ಸೇರಿದ ಹನ್ನೆರಡು ಸ್ಥಳಗಳಲ್ಲಿ ಇಂದು ಮುಂಜಾನೆಯಿಂದ ಇಡಿ ಶೋಧ ಕಾರ್ಯ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಇಡಿ ದಾಳಿ ಕುರಿತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಛತ್ತೀಸ್ಗಢ ರಾಜ್ಯ ಕಾಂಗ್ರೆಸ್ ಸಂವಹನ ವಿಭಾಗದ ಮುಖ್ಯಸ್ಥ ಸುಶೀಲ್ ಆನಂದ್ ಶುಕ್ಲಾ ಅವರು, “ರಾಯಪುರದಲ್ಲಿ ನಡೆಯಲಿರುವ ಕಾಂಗ್ರೆಸ್‌ನ 85 ನೇ ಸಂಪುಟ ಸಭೆಗೆ ಬಿಜೆಪಿ ಹೆದರುತ್ತಿದೆ. ಅದಕ್ಕೆ ಅಡ್ಡಿಪಡಿಸುವ ಪ್ರಯತ್ನದಲ್ಲಿ ಬಿಜೆಪಿ ಕೇಂದ್ರದ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ. ಬಿಜೆಪಿ ತನ್ನ ರಾಜಕೀಯ ಪ್ರತಿಸ್ಪರ್ಧಿಗಳನ್ನು ಎದುರಿಸಲು ವಿಫಲವಾದಾಗಲೆಲ್ಲಾ ಅದು ಇಡಿ ಮತ್ತು ಸಿಬಿಐನಂತಹ ಕೇಂದ್ರೀಯ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತದೆ" ಎಂದು ಆರೋಪಿಸಿದ್ದಾರೆ.

ಬಿಜೆಪಿಯ ದುರ್ನಡತೆ ವಿರುದ್ಧ ಕಾಂಗ್ರೆಸ್ ಇಡಿ ಕಚೇರಿ ಬಳಿ ಬೆಳಿಗ್ಗೆ 11 ಗಂಟೆಗೆ ಪ್ರತಿಭಟನೆ ನಡೆಸಲಿದೆ ಎಂದು ತಿಳಿಸಿದ್ದಾರೆ.

ಹಿರಿಯ ಅಧಿಕಾರಿಗಳು, ಉದ್ಯಮಿಗಳು, ರಾಜಕಾರಣಿಗಳು ಮತ್ತು ಮಧ್ಯವರ್ತಿಗಳನ್ನು ಒಳಗೊಂಡ ಕಾರ್ಟೆಲ್‌ನಿಂದ ಛತ್ತೀಸ್‌ಗಢದಲ್ಲಿ ಸಾಗಿಸಲಾದ ಪ್ರತಿ ಟನ್ ಕಲ್ಲಿದ್ದಲಿಗೆ 25 ರೂಪಾಯಿಗಳ ಅಕ್ರಮ ಸುಲಿಗೆಯ ಬೃಹತ್ ಹಗರಣ ಕುರಿತು ಇಡಿ ತನಿಖೆ ನಡೆಸುತ್ತಿದೆ ಎಂದು ತನಿಖಾ ಸಂಸ್ಥೆಯು ಹೇಳಿದೆ.

ಪ್ರಕರಣದಲ್ಲಿ ಈ ವರೆಗೂ ರಾಜ್ಯ ಆಡಳಿತ ಸೇವಾ ಅಧಿಕಾರಿ ಚೌರಾಸಿಯಾ, ಸೂರ್ಯಕಾಂತ್ ತಿವಾರಿ, ಅವರ ಚಿಕ್ಕಪ್ಪ ಲಕ್ಷ್ಮೀಕಾಂತ್ ತಿವಾರಿ, ಛತ್ತೀಸ್‌ಗಢ ಕೇಡರ್ ಐಎಎಸ್ ಅಧಿಕಾರಿ ಸಮೀರ್ ವಿಷ್ಣೋಯ್ ಮತ್ತು ಇನ್ನೊಬ್ಬ ಕಲ್ಲಿದ್ದಲು ಉದ್ಯಮಿ ಸುನೀಲ್ ಅಗರವಾಲ್ ಸೇರಿದಂತೆ ಒಂಬತ್ತು ಜನರನ್ನು ಬಂಧಿಸಲಾಗಿದೆ.

ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಮಾತನಾಡಿ, ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

"ಇಂದು ಛತ್ತೀಸ್‌ಗಢ ಪ್ರದೇಶ ಕಾಂಗ್ರೆಸ್ ಸಮಿತಿಯ ಖಜಾಂಚಿ, ಪಕ್ಷದ ಮಾಜಿ ಉಪಾಧ್ಯಕ್ಷ ಮತ್ತು ಶಾಸಕ ಸೇರಿದಂತೆ ನನ್ನ ಅನೇಕ ಸಹೋದ್ಯೋಗಿಗಳ ನಿವಾಸದ ಮೇಲೆ ಇಡಿ ದಾಳಿ ಮಾಡಿದೆ", ಇಂತಹ ಕೃತ್ಯಗಳು ನಮ್ಮ ನೈತಿಕಸ್ಥೈರ್ಯವನ್ನು ಕುಗ್ಗಿಸುವುದಿಲ್ಲ ಎಂದು ಹೇಳಿದ್ದಾರೆ.

“ನಾಲ್ಕು ದಿನಗಳ ನಂತರ ರಾಯ್‌ಪುರದಲ್ಲಿ ಕಾಂಗ್ರೆಸ್‌ನ ಸರ್ವಸದಸ್ಯರ ಅಧಿವೇಶನವಿದೆ. ಇಂತಹ ಕೃತ್ಯಗಳ ಮೂಲಕ ಅಧಿವೇಶನದ ಸಿದ್ಧತೆಯಲ್ಲಿ ತೊಡಗಿರುವ ನಮ್ಮ ಸಹೋದ್ಯೋಗಿಗಳ ಉತ್ಸಾಹವನ್ನು ಕುಗ್ಗಿಸಲು ಸಾಧ್ಯವಿಲ್ಲ. ‘ಭಾರತ್ ಜೋಡೋ ಯಾತ್ರೆ’ಯ ಯಶಸ್ಸಿನಿಂದ ಬಿಜೆಪಿಗೆ ನಿರಾಸೆಯಾಗಿದೆ ಮತ್ತು ಅದಾನಿ ಸತ್ಯ ಬಹಿರಂಗವಾಗಿದೆ. "ಈ ದಾಳಿಯ ಮೂಲಕ ಜನರ ಗಮನವನ್ನು ಬೇರೆಡೆ ಸೆಳೆಯಲು ಯತ್ನಗಳು ನಡೆದಿವೆ. ಆದರೆ, ದೇಶಕ್ಕೆ ಸತ್ಯ ತಿಳಿದಿದೆ, ನಾವು ಹೋರಾಡುತ್ತೇವೆ ಮತ್ತು ಗೆಲ್ಲುತ್ತೇವೆ" ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com