ಚುನಾವಣಾ ಆಯೋಗದ ನಿರ್ಧಾರದ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋದ ಉದ್ಧವ್ ಠಾಕ್ರೆ ಬಣ

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಏಕನಾಥ್ ಶಿಂಧೆ ಅವರಿಗೆ ಶಿವಸೇನೆಯ ಹೆಸರು ಮತ್ತು ಚಿಹ್ನೆಯನ್ನು ನೀಡುವ ಚುನಾವಣಾ ಆಯೋಗದ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್

ನವದೆಹಲಿ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಏಕನಾಥ್ ಶಿಂಧೆ ಅವರಿಗೆ ಶಿವಸೇನೆಯ ಹೆಸರು ಮತ್ತು ಚಿಹ್ನೆಯನ್ನು ನೀಡುವ ಚುನಾವಣಾ ಆಯೋಗದ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.

ಹಿರಿಯ ವಕೀಲ ಎಎಂ ಸಿಂಘ್ವಿ ಅವರು ಸೋಮವಾರ ಸಿಜೆಐ ಡಿವೈ ಚಂದ್ರಚೂಡ್ ಅವರ ಪೀಠದ ಮುಂದೆ ಪಟ್ಟಿಯಲ್ಲಿಲ್ಲದ ಪ್ರಸ್ತಾಪವನ್ನು ಮಾಡಲು ಪ್ರಯತ್ನಿಸಿದರು. ತುರ್ತು ವಿಚಾರಣೆಗೆ ನಿರಾಕರಿಸಿದ ಸಿಜೆಐ ಡಿವೈ ಚಂದ್ರಚೂಡ್ ಅವರು ಮಂಗಳವಾರ ಅದೇ ವಿಷಯವನ್ನು ಪ್ರಸ್ತಾಪಿಸುವಂತೆ ಹೇಳಿದರು.

'ಕ್ಷಮಿಸಿ ಮಿಸ್ಟರ್ ಸಿಂಘ್ವಿ, ನೀವು ಉಲ್ಲೇಖಿಸುವ ವಿಚಾರ ಪಟ್ಟಿಯ ಅಡಿಯಲ್ಲಿ ವಿಚಾರಣೆಗೆ ಬರಬೇಕು. ನಾಳೆ ಬನ್ನಿ. ನಿಯಮ ಎಲ್ಲರಿಗೂ ಅನ್ವಯಿಸುತ್ತದೆ' ಎಂದು ಸಿಜೆಐ ಹೇಳಿದರು.

ಚುನಾವಣಾ ಆಯೋಗ ಶುಕ್ರವಾರ ಏಕನಾಥ್ ಶಿಂಧೆ ಅವರ ಬಣಕ್ಕೆ ಪಕ್ಷದ ಹೆಸರು ಮತ್ತು 'ಬಿಲ್ಲು ಮತ್ತು ಬಾಣ'ದ ಚಿಹ್ನೆಯನ್ನು ಬಳಸಲು ಅನುಮತಿ ನೀಡಿದೆ. ಶಾಸಕಾಂಗ ವಿಭಾಗದಲ್ಲಿ ಪಕ್ಷದ ಸಂಖ್ಯಾ ಬಲವನ್ನು ಅವಲಂಬಿಸಿ ಈ ಆದೇಶವನ್ನು ನೀಡಲಾಗಿದೆ. ಅಲ್ಲಿ 55 ಶಾಸಕರ ಪೈಕಿ 40 ಶಾಸಕರು ಮತ್ತು 18 ಲೋಕಸಭಾ ಸದಸ್ಯರಲ್ಲಿ 13 ಸದಸ್ಯರ ಬೆಂಬಲವನ್ನು ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೊಂದಿದ್ದಾರೆ.

ಶಿಂಧೆ ಬಣವನ್ನು ಬೆಂಬಲಿಸಿದ 40 ಶಾಸಕರು ಒಟ್ಟು 47,82,440 ಮತಗಳಲ್ಲಿ 36,57,327 ಮತಗಳನ್ನು ಗಳಿಸಿದ್ದಾರೆ. ಅಂದರೆ, ಇದು ಸುಮಾರು ಶೇ 76ರಷ್ಟು ಮತಗಳು ವಿಜೇತ ಶಾಸಕರ ಪರವಾಗಿ ಬಂದಿವೆ. ಇನ್ನು ಉದ್ಧವ್ ಠಾಕ್ರೆ ಬಣದಿಂದ ಬೆಂಬಲಿತವಾದ 15 ಶಾಸಕರು ಒಟ್ಟು 11,25,113 ಮತಗಳನ್ನು ಗಳಿಸಿದ್ದಾರೆ. ಈ ಆಧಾರದಲ್ಲಿ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ನೀಡಲಾಗಿದೆ ಎಂದು ಆಯೋಗವು ತನ್ನ ಆದೇಶದಲ್ಲಿ ತಿಳಿಸಿದೆ. 

ಶನಿವಾರ ಶಿಂಧೆ ಬಣವು ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಅನ್ನು ಸಲ್ಲಿಸಿತ್ತು. ಅದರಲ್ಲಿ, ಚುನಾವಣಾ ಆಯೋಗದ ಆದೇಶವನ್ನು ಪ್ರಶ್ನಿಸಿ ಸಲ್ಲಿಸುವ ಯಾವುದೇ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವ ಮೊದಲು, ಮಹಾರಾಷ್ಟ್ರ ಸರ್ಕಾರದ ನಿಲುವು ಏನೆಂಬುದನ್ನು ತಿಳಿದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com