ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಕಾಶ್ಮೀರಿ ಪಂಡಿತನ ಹತ್ಯೆ ಮಾಡಿದ್ದ ಉಗ್ರನ ಎನ್‌ಕೌಂಟರ್
ಕಾಶ್ಮೀರಿ ಪಂಡಿತ್ ಸಂಜಯ್ ಶರ್ಮಾ ಅವರನ್ನು ಗುಂಡಿಕ್ಕಿ ಕೊಂದ ಎರಡು ದಿನಗಳ ನಂತರ, ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಅಪರಾಧದಲ್ಲಿ ಭಾಗಿಯಾಗಿದ್ದ ಉಗ್ರನನ್ನು ಹೊಡೆದುರುಳಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
Published: 28th February 2023 12:30 PM | Last Updated: 28th February 2023 08:17 PM | A+A A-

ಸಾಂದರ್ಭಿಕ ಚಿತ್ರ
ಶ್ರೀನಗರ: ಕಾಶ್ಮೀರಿ ಪಂಡಿತ್ ಸಂಜಯ್ ಶರ್ಮಾ ಅವರನ್ನು ಗುಂಡಿಕ್ಕಿ ಕೊಂದ ಎರಡು ದಿನಗಳ ನಂತರ, ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಅಪರಾಧದಲ್ಲಿ ಭಾಗಿಯಾಗಿದ್ದ ಉಗ್ರನನ್ನು ಹೊಡೆದುರುಳಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಭದ್ರತಾ ಪಡೆಗಳ ಜತೆ ರಾತ್ರಿ ನಡೆದ ಗುಂಡಿನ ಚಕಮಕಿಯಲ್ಲಿ ಹತನಾದ ಉಗ್ರನನ್ನು ಶರ್ಮಾ ಹಂತಕ ಎಂದು ಗುರುತಿಸಲಾಗಿದೆ ಎಂದು ಎಡಿಜಿಪಿ ಕಾಶ್ಮೀರ ವಿಜಯ್ ಕುಮಾರ್ ಹೇಳಿದ್ದಾರೆ.
#AwantiporaEncounterUpdate: 01 more #terrorist killed (Total 02). #Incriminating materials including arms & ammunition recovered. #Search going on. Further details shall follow. https://t.co/1EdTeobWYP
— Kashmir Zone Police (@KashmirPolice) February 28, 2023
ಎನ್‌ಕೌಂಟರ್‌ನಲ್ಲಿ ಮತ್ತೋರ್ವ ಉಗ್ರನನ್ನು ಹೊಡೆದುರುಳಿಸಲಾಗಿದೆ. ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳು ಸೇರಿದಂತೆ ಹಲವಾರು ಸ್ಫೋಟಕ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಸದ್ಯ ಶೋಧ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಹೆಚ್ಚಿನ ವಿವರಗಳಿಗಾಗಿ ನಿರೀಕ್ಷಿಸಲಾಗುತ್ತಿದೆ.
'ಹತ್ಯೆಗೀಡಾದ ಭಯೋತ್ಪಾದಕನನ್ನು ಪುಲ್ವಾಮಾ (ಎ ವರ್ಗ)ದ ಅಕಿಬ್ ಮುಸ್ತಾಕ್ ಭಟ್ ಎಂದು ಗುರುತಿಸಲಾಗಿದೆ. ಆತ ಆರಂಭದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಭಯೋತ್ಪಾದನೆಗಾಗಿ ಕೆಲಸ ಮಾಡಿದ್ದನು. ಇತ್ತೀಚಿನ ದಿನಗಳಲ್ಲಿ ಆತ ಟಿಆರ್‌ಎಫ್‌ನೊಂದಿಗೆ ಕೆಲಸ ಮಾಡುತ್ತಿದ್ದನು. ದಿವಂಗತ ಸಂಜಯ್ ಶರ್ಮಾ ಕೊಲೆಗಾರ ಇದೀಗ ಎನ್‌ಕೌಂಟರ್‌ಗೆ ಬಲಿಯಾಗಿದ್ದಾನೆ' ಎಂದು ಕುಮಾರ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಪುಲ್ವಾಮಾದಲ್ಲಿ ಉಗ್ರರಿಂದ ಗುಂಡಿನ ದಾಳಿ: ಓರ್ವ ಕಾಶ್ಮೀರಿ ಪಂಡಿತನ ಹತ್ಯೆ
ಬ್ಯಾಂಕ್‌ವೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದ ಶರ್ಮಾ ಅವರು ಭಾನುವಾರ ಬೆಳಗ್ಗೆ ಸ್ಥಳೀಯ ಮಾರುಕಟ್ಟೆಗೆ ತೆರಳುತ್ತಿದ್ದಾಗ ಪುಲ್ವಾಮಾದ ಅಚಾನ್‌ನಲ್ಲಿರುವ ಅವರ ಮನೆಯಿಂದ ಕೇವಲ 100 ಮೀಟರ್ ದೂರದಲ್ಲಿ ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದರು.
ದಾರಿಹೋಕರು ಆತನನ್ನು ಆಸ್ಪತ್ರೆಗೆ ಕರೆದೊಯ್ದರೂ, ಆ ವೇಳೆಗಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದರು. ಸೋಮವಾರ ಅವರ ಸ್ವಗ್ರಾಮ ಪುಲ್ವಾಮಾದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.