ಲೈಂಗಿಕ ಕಿರುಕುಳ ಆರೋಪ; ನೈತಿಕ ಹೊಣೆ ಹೊತ್ತು ಕ್ರೀಡಾ ಖಾತೆಯನ್ನು ಬಿಟ್ಟುಕೊಟ್ಟ ಸಂದೀಪ್ ಸಿಂಗ್

ಲೈಂಗಿಕ ಕಿರುಕುಳ ಆರೋಪದಲ್ಲಿ ತಮ್ಮ ವಿರುದ್ಧ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಹರಿಯಾಣದ ಸಚಿವ ಸಂದೀಪ್ ಸಿಂಗ್ ಅವರು ಭಾನುವಾರ ತಮ್ಮ ಕ್ರೀಡಾ ಖಾತೆಯನ್ನು ಬಿಟ್ಟುಕೊಟ್ಟಿದ್ದು, ನೈತಿಕ ಆಧಾರದ ಮೇಲೆ ಈ ಕ್ರಮ ಕೈಗೊಂಡಿರುವುದಾಗಿ ಹೇಳಿದ್ದಾರೆ.
ಸಂದೀಪ್ ಸಿಂಗ್
ಸಂದೀಪ್ ಸಿಂಗ್

ಚಂಡೀಗಢ: ಲೈಂಗಿಕ ಕಿರುಕುಳ ಆರೋಪದಲ್ಲಿ ತಮ್ಮ ವಿರುದ್ಧ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಹರಿಯಾಣದ ಸಚಿವ ಸಂದೀಪ್ ಸಿಂಗ್ ಅವರು ಭಾನುವಾರ ತಮ್ಮ ಕ್ರೀಡಾ ಖಾತೆಯನ್ನು ಬಿಟ್ಟುಕೊಟ್ಟಿದ್ದು, ನೈತಿಕ ಆಧಾರದ ಮೇಲೆ ಈ ಕ್ರಮ ಕೈಗೊಂಡಿರುವುದಾಗಿ ಹೇಳಿದ್ದಾರೆ.

ರಾಜ್ಯದ ಮಹಿಳಾ ಜೂನಿಯರ್ ಅಥ್ಲೆಟಿಕ್ಸ್ ತರಬೇತುದಾರರ ದೂರಿನ ಮೇರೆಗೆ ಚಂಡೀಗಢ ಪೊಲೀಸರು ಸಿಂಗ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಒಂದು ದಿನದ ನಂತರ ಈ ಬೆಳವಣಿಗೆ ವರದಿಯಾಗಿದೆ.
ಮಾಜಿ ಭಾರತೀಯ ಹಾಕಿ ತಂಡದ ನಾಯಕರೂ ಆಗಿರುವ 36 ವರ್ಷದ ಸಿಂಗ್ ವಿರುದ್ಧ ಅಕ್ರಮ ಬಂಧನ ಮತ್ತು ಕ್ರಿಮಿನಲ್ ಬೆದರಿಕೆಯ ಆರೋಪವನ್ನೂ ಹೊರಿಸಲಾಗಿದೆ.

ತಮ್ಮ ವರ್ಚಸ್ಸಿಗೆ ಕಳಂಕ ತಂದಿದ್ದಾರೆ ಎಂದು ಆರೋಪಿಸಿ ಮಹಿಳಾ ಕೋಚ್ ವಿರುದ್ದ ಸಂದೀಪ್ ಸಿಂಗ್ ಅವರು ದೂರು ದಾಖಲಿಸಿದ ನಂತರ ಹರಿಯಾಣದ ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ಶನಿವಾರ ಸಮಿತಿಯನ್ನು ರಚಿಸಿದ್ದರು.

ಈ ಸಮಿತಿಯು ತನ್ನ ವರದಿಯನ್ನು ನೀಡುವವರೆಗೆ, ನೈತಿಕ ಆಧಾರದ ಮೇಲೆ ಅವರು ತಮ್ಮ ಕ್ರೀಡಾ ಖಾತೆಯನ್ನು ಮುಖ್ಯಮಂತ್ರಿಗೆ ಹಸ್ತಾಂತರಿಸುತ್ತಿದ್ದೇನೆ ಎಂದಿದ್ದರು. ಆದರೆ, ಅವರು ತಮ್ಮ ಖಾತೆಯನ್ನು ಬಿಟ್ಟುಕೊಟ್ಟಿದ್ದಾರೆಯೇ ಅಥವಾ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆಯೇ ಎಂಬುದು ತಕ್ಷಣವೇ ಸ್ಪಷ್ಟವಾಗಿಲ್ಲ.

ಈ ಬಗ್ಗೆ ಸ್ವತಂತ್ರ ತನಿಖೆಗೆ ಕರೆ ನೀಡಿದ ಸಚಿವರು, ಕೋಚ್ ಮಾಡಿರುವ ಆರೋಪಗಳನ್ನು ನಿರಾಧಾರ ಎಂದು ತಳ್ಳಿಹಾಕಿದರು.

ಡಿಜಿಪಿ ಪಿಕೆ ಅಗರವಾಲ್ ಶನಿವಾರ ಹೊರಡಿಸಿದ ಆದೇಶದಲ್ಲಿ, 'ಹರಿಯಾಣದ ರಾಜ್ಯದ ಕ್ರೀಡೆ ಮತ್ತು ಯುವಜನ ವ್ಯವಹಾರಗಳ ಸಚಿವ ಸಂದೀಪ್ ಸಿಂಗ್ ಅವರಿಂದ ದೂರು ಸ್ವೀಕರಿಸಲಾಗಿದೆ. ಈ ಸಂಬಂಧ ಸಾಮಾಜಿಕ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲೂ ಆರೋಪಗಳು ಹರಿದಾಡುತ್ತಿದ್ದು, ಸಮಿತಿಯು ಈ ವಿಷಯದ ಬಗ್ಗೆ ತಕ್ಷಣವೇ ಆಳವಾದ ತನಿಖೆ ನಡೆಸಿ ತನ್ನ ವರದಿಯನ್ನು ಈ (ಡಿಜಿಪಿ) ಕಚೇರಿಗೆ ಶೀಘ್ರವಾಗಿ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.

ಸ್ಥಳೀಯ ಮಹಿಳಾ ಕೋಚ್ ನೀಡಿದ ದೂರಿನ ಮೇರೆಗೆ, ಹರಿಯಾಣದ ಕ್ರೀಡಾ ಸಚಿವರ ವಿರುದ್ಧ  2022ರ ಡಿಸೆಂಬರ್ 31ರಂದು ರಂದು ಐಪಿಸಿ ಸೆಕ್ಷನ್ 354, 354A, 354B, 342, 506 ರ ಅಡಿಯಲ್ಲಿ ಎಫ್‌ಐಆರ್ ಅನ್ನು ಚಂಡೀಗಢದ ಪೊಲೀಸ್ ಠಾಣೆ ಸೆಕ್ಟರ್ 26 ರಲ್ಲಿ ದಾಖಲಿಸಲಾಗಿದೆ ಮತ್ತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

ರಾಜ್ಯದ ಜೂನಿಯರ್ ಅಥ್ಲೆಟಿಕ್ಸ್ ತರಬೇತುದಾರರೊಬ್ಬರು ಗುರುವಾರ ಸಚಿವರ ವಿರುದ್ಧ ಲೈಂಗಿಕ ಕಿರುಕುಳದ ಆರೋಪಗಳನ್ನು ಮಾಡಿದ್ದಾರೆ ಮತ್ತು ಒಂದು ದಿನದ ನಂತರ ಪೊಲೀಸ್ ದೂರು ದಾಖಲಿಸಿದ್ದಾರೆ.

ಕೆಲವು ಅಧಿಕೃತ ಕೆಲಸದ ನಿಮಿತ್ತ ಸಂದೀಪ್ ಸಿಂಗ್ ಅವರನ್ನು ಭೇಟಿಯಾಗಲು ಚಂಡೀಗಢದಲ್ಲಿರುವ ಅವರ ನಿವಾಸ ಹಾಗೂ ಕ್ಯಾಂಪ್ ಆಫೀಸ್‌ಗೆ ಹೋಗಿದ್ದಾಗ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com