
ಕೇಂದ್ರ ಸಚಿವ ಅಮಿತ್ ಶಾ
ತ್ರಿಪುರಾ: 2024ರ ಜನವರಿ 1 ರಂದು ಅಯೋಧ್ಯೆಯ ರಾಮಮಂದಿರ ಭಕ್ತರ ದರ್ಶನಕ್ಕೆ ಮುಕ್ತವಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುರುವಾರ ಘೋಷಿಸಿದ್ದಾರೆ.
ಇಂದು ದಕ್ಷಿಣ ತ್ರಿಪುರಾದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, "ಕಾಂಗ್ರೆಸ್ ರಾಮಮಂದಿರ ನಿರ್ಮಾಣಕ್ಕೆ ಅಡ್ಡಿಪಡಿಸಿತು. ಆದರೆ ಸುಪ್ರೀಂ ಕೋರ್ಟ್ ತೀರ್ಪು ಬಂದ ನಂತರ, ಮೋದಿಜಿ ಮಂದಿರ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಿದರು. ಪ್ರಧಾನಿ ಮೋದಿ ಅವರು 'ಭೂಮಿ ಪೂಜೆ' ನೆರವೇರಿಸಿದರು ಮತ್ತು ದೇವಸ್ಥಾನದ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸುತ್ತಿದ್ದಾರೆ ಎಂದರು.
ಇದನ್ನು ಓದಿ: ಉತ್ತರ ಪ್ರದೇಶದಲ್ಲಿ ಭಾರತ್ ಜೋಡೋ ಯಾತ್ರೆ: ಅಯೋಧ್ಯೆ ರಾಮ ಮಂದಿರದ ಪ್ರಧಾನ ಅರ್ಚಕರಿಂದ ರಾಹುಲ್ ಗಾಂಧಿಗೆ ಪತ್ರ!
2019ರ ಚುನಾವಣಾ ಪ್ರಚಾರದ ಸಮಯದಲ್ಲಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು 'ಮಂದಿರ್ ವಹಿ ಬನೇಂಗೆ...ತಾರಿಖ್ ನಹೀ ಬತಾಂಗೆ'(ನಾವು ದೇವಾಲಯವನ್ನು ಮಾಡುತ್ತೇವೆ, ಆದರೆ ದಿನಾಂಕವನ್ನು ಹೇಳುವುದಿಲ್ಲ) ಎಂದು ಹೇಳುತ್ತಿದ್ದರು. ಆದರೆ ಇಂದು ರಾಹುಲ್ ಗಾಂಧಿ ಮತ್ತು ಎಲ್ಲರೂ ಅದನ್ನು ಕೇಳಬೇಕು. ಜನವರಿ 1, 2024 ರಂದು ಅಯೋಧ್ಯೆಯಲ್ಲಿ ಜನರಿಗಾಗಿ ಬೃಹತ್ ಮತ್ತು ಆಕಾಶದೆತ್ತರದ ದೇವಾಲಯ ಸಿದ್ಧವಾಗಲಿದೆ" ಎಂದು ಅಮಿತ್ ಶಾ ಹೇಳಿದರು.
ಸುಪ್ರೀಂ ಕೋರ್ಟ್ ದಶಕಗಳಿಂದ ಕಾನೂನು ವಿವಾದದಲ್ಲಿ ಸಿಲುಕಿದ್ದ ಸ್ಥಳದಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅನುಮತಿ ನೀಡಿದ ಬಳಿಕ ಹಾಗೂ ಜಾಗವನ್ನು ಹಸ್ತಾಂತರ ಮಾಡಿದ ಬಳಿಕ ಆಗಸ್ಟ್ 2020 ರಲ್ಲಿ ನಿರ್ಮಾಣ ಕಾರ್ಯ ಪ್ರಾರಂಭವಾಯಿತು. ಆಗಸ್ಟ್ 5 ರಂದು ಪ್ರಧಾನಿ ನರೇಂದ್ರ ಮೋದಿ ಅವರು 'ಭೂಮಿ ಪೂಜೆ' ಮಾಡಿದ್ದರು.