ಇಂದು ಎಂಸಿಡಿ ಮೇಯರ್ ಚುನಾವಣೆ ಇಲ್ಲ; ಎಎಪಿ-ಬಿಜೆಪಿ ಘರ್ಷಣೆ ನಂತರ ಸದನ ಮುಂದೂಡಿಕೆ
ದೆಹಲಿ ಮಹಾನಗರ ಪಾಲಿಕೆಯಲ್ಲಿ ಎಎಪಿ ಮತ್ತು ಬಿಜೆಪಿ ನಡುವೆ ಜಟಾಪಟಿಯ ನಂತರ ಹೊಸದಾಗಿ ಚುನಾಯಿತವಾದ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್(MCD)ನ ಚೊಚ್ಚಲ ಸಭೆಯು ಮೇಯರ್ ಮತ್ತು ಉಪಮೇಯರ್ ಅನ್ನು ಆಯ್ಕೆ ಮಾಡದೆಯೇ...
Published: 06th January 2023 03:56 PM | Last Updated: 06th January 2023 03:56 PM | A+A A-

ಎಎಪಿ-ಬಿಜೆಪಿ ಘರ್ಷಣೆ
ನವದೆಹಲಿ: ದೆಹಲಿ ಮಹಾನಗರ ಪಾಲಿಕೆಯಲ್ಲಿ ಎಎಪಿ ಮತ್ತು ಬಿಜೆಪಿ ನಡುವೆ ಜಟಾಪಟಿಯ ನಂತರ ಹೊಸದಾಗಿ ಚುನಾಯಿತವಾದ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್(MCD)ನ ಚೊಚ್ಚಲ ಸಭೆಯು ಮೇಯರ್ ಮತ್ತು ಉಪಮೇಯರ್ ಅನ್ನು ಆಯ್ಕೆ ಮಾಡದೆಯೇ ಮುಂದೂಡಿಕೆಯಾಗಿದೆ.
ಎಂಸಿಡಿ ಸದನ ಸಭೆಯನ್ನು ದಿನದ ಮಟ್ಟಿಗೆ ಮುಂದೂಡಲಾಗಿದೆ. ಮುಂದಿನ ದಿನಾಂಕವನ್ನು ನಂತರ ಪ್ರಕಟಿಸಲಾಗುವುದು ಎಂದು ಮೇಯರ್ ಚುನಾವಣಾ ಪ್ರಕ್ರಿಯೆ ಮೇಲ್ವಿಚಾರಣೆ ವಹಿಸಿಕೊಂಡಿರುವ ಭಾರತೀಯ ಜನತಾ ಪಕ್ಷದ ಕೌನ್ಸಿಲರ್ ಸತ್ಯ ಶರ್ಮಾ ತಿಳಿಸಿದ್ದಾರೆ.
ಇದನ್ನು ಓದಿ: ಮೇಯರ್ ಆಯ್ಕೆ ಚುನಾವಣೆ: ದೆಹಲಿ ಮಹಾನಗರ ಪಾಲಿಕೆಯಲ್ಲಿ ಹೈಡ್ರಾಮಾ, ಎಎಪಿ-ಬಿಜೆಪಿ ಸಂಘರ್ಷ, ತೀವ್ರ ಪ್ರತಿಭಟನೆ
ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ಅವರು ತಾತ್ಕಾಲಿಕವಾಗಿ ಬಿಜೆಪಿಯ ಸತ್ಯಾ ಶರ್ಮಾ ಅವರನ್ನು ಸ್ಪೀಕರ್ ಆಗಿ ಆಯ್ಕೆ ಮಾಡಿದ್ದಾರೆ. ಶರ್ಮಾ ಅವರು 10 ಮಂದಿ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸುವ ಪ್ರಕ್ರಿಯೆಯನ್ನು ಆರಂಭಿಸಿದಾಗ ಎಎಪಿ ಕೌನ್ಸಿಲರ್‌ಗಳು ಮತ್ತು ಶಾಸಕರು ಅವರ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು ಮತ್ತು ಚುನಾಯಿತ ಪ್ರತಿನಿಧಿಗಳಿಗೆ ಮೊದಲು ಪ್ರಮಾಣ ವಚನ ಬೋಧಿಸುವಂತೆ ಒತ್ತಾಯಿಸಿದರು. ಈ ವೇಳೆ ಬಿಜೆಪಿ ಮತ್ತು ಆಪ್ ಸದಸ್ಯರ ನಡವೆ ಜಟಾಪಟಿ ಆರಂಭವಾಯಿತು.
ದೆಹಲಿ ಮಹಾನಗರ ಪಾಲಿಕೆ ಸದಸ್ಯರ ಕಚ್ಚಾಟದ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಶೆಲ್ಲಿ ಒಬೆರಾಯ್ ಮೇಯರ್ ಮತ್ತು ಮಹಮ್ಮದ್ ಇಕ್ಬಾಲ್ ಉಪಮೇಯರ್ ಸ್ಥಾನಕ್ಕೆ ಎಎಪಿ ಅಭ್ಯರ್ಥಿಗಳಾಗಿದ್ದು, ಶೆಲ್ಲಿ, ಪೂರ್ವ ಪಟೇಲ್ ನಗರ ವಾರ್ಡ್‌ನಿಂದ ಮೊದಲ ಸಲ ಆಯ್ಕೆಯಾಗಿದ್ದಾರೆ. ಇಕ್ಬಾಲ್, ಚಾಂದಿನಿ ಮಹಲ್ ವಾರ್ಡ್‌ನಿಂದ ಎರಡನೆ ಸಲ ಜಯಶೀಲರಾಗಿದ್ದಾರೆ.