ಪ್ರೇಯಸಿಯರೊಂದಿಗೆ ಹೆಚ್ಚು ಸಮಯ ಕಳೆಯಲು ಸ್ಪೈಸ್ ಜೆಟ್ ವಿಮಾನಕ್ಕೆ ಬಾಂಬ್ ಕರೆ ಮಾಡಿದ ಯುವಕರು

ಪ್ರೇಯಸಿಯರೊಂದಿಗೆ ಹೆಚ್ಚಿನ ಸಮಯ ಕಳೆಯುವ ಉದ್ದೇಶದಿಂದ ಮೂವರು ವ್ಯಕ್ತಿಗಳು ಸ್ಪೈಸ್ ಜೆಟ್ ವಿಮಾನಕ್ಕೆ ಬಾಂಬ್ ಬೆದರಿಕೆ ಕರೆ ಮಾಡಿದ್ದಾರೆ. 
ಸ್ಪೈಸ್ ಜೆಟ್
ಸ್ಪೈಸ್ ಜೆಟ್

ನವದೆಹಲಿ: ಪ್ರೇಯಸಿಯರೊಂದಿಗೆ ಹೆಚ್ಚಿನ ಸಮಯ ಕಳೆಯುವ ಉದ್ದೇಶದಿಂದ ಮೂವರು ವ್ಯಕ್ತಿಗಳು ಸ್ಪೈಸ್ ಜೆಟ್ ವಿಮಾನಕ್ಕೆ ಬಾಂಬ್ ಬೆದರಿಕೆ ಕರೆ ಮಾಡಿದ್ದಾರೆ. 

ದೆಹಲಿಯ ವಿಮಾನ ನಿಲ್ದಾಣದ ಸ್ಪೈಸ್ ಜೆಟ್ ಕಾಲ್ ಸೆಂಟರ್ ಗೆ ಈ ಕರೆ ಮಾಡಲಾಗಿದ್ದು ಕೆಲ ಕಾಲ ತೀವ್ರ ಆತಂಕ ಉಂಟಾಗಿತ್ತು. 

ಹುಸಿ ಬಾಂಬ್ ಕರೆ ಮಾಡಿದವರ ಮೂವರ ಪೈಕಿ ಓರ್ವನನ್ನು ಅಭಿನವ್ ಪ್ರಕಾಶ್ (24) ಎಂದು ಗುರುತಿಸಲಾಗಿದ್ದು, ಬ್ರಿಟೀಷ್ ಏರ್ವೇಸ್ ಗೆ ಟಿಕೆಟಿಂಗ್ ಏಜೆಂಟ್ ಆಗಿ ತರಬೇತಿ ಪಡೆಯುತ್ತಿರುವ ವ್ಯಕ್ತಿಯಾಗಿದ್ದಾನೆ. ಈತನನ್ನು ಪೊಲೀಸರು ಬಂಧಿಸಿದ್ದಾರೆ. 

ಐಜಿಐ ನ ಡಿಸಿಪಿ ಈ ಘಟನೆಯ ವಿವರಗಳನ್ನು ಹಂಚಿಕೊಂದಿದ್ದು, ಸ್ಪೈಸ್ ಜೆಟ್ ಕಾಲ್ ಸೆಂಟರ್ ನಿಂದ ಮೊದಲು ಮಾಹಿತಿ ಲಭ್ಯವಾಯಿತು. ಪುಣೆಗೆ ತೆರಳಬೇಕಿದ್ದ ವಿಮಾನ ಸಂಖ್ಯೆ ಎಸ್ ಜಿ-8938 ನಲ್ಲಿ ಬಾಂಬ್ ಇರುವುದಾಗಿ ಕರೆ ಬಂದಿತ್ತು ಎಂದು ತಿಳಿಸಿದ್ದಾರೆ. 

ತಕ್ಷಣವೇ ಭದ್ರತಾ ಏಜೆನ್ಸಿಗಳು ಕಾರ್ಯಪ್ರವೃತ್ತವಾದವು ಸಂಬಂಧಪಟ್ಟವರೊಂದಿಗೆ ಸಭೆ ನಡೆಸಲಾಯಿತು ಎಂದು ಡಿಸಿಪಿ ತಿಳಿಸಿದ್ದಾರೆ. 

182 ಪ್ರಯಾಣಿಕರು ವಿಮಾನಸಿಬ್ಬಂದಿಗಳನ್ನು ತಕ್ಷಣವೇ ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ಯಲಾಯಿತು. ಅಗ್ನಿಶಾಮನ ಸಿಬ್ಬಂದಿಗಳನ್ನು ಕರೆಸಲಾಯಿತು. ತಪಾಸಣೆ ಪೂರ್ಣಗೊಳಿಸಿದ ಬಳಿಕ ಯಾವುದೇ ಸಂಶಯಾಸ್ಪದ ವಸ್ತು ದೊರೆಯಲಿಲ್ಲ ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ. 

ಕೊನೆಗೆ ಕರೆ ಬಂದ ನಂಬರ್ ನ್ನು ಪರಿಶೀಲಿಸಿದಾಗ ಅದು ಅಭಿನವ್ ಪ್ರಕಾಶ್ ಅವರಿಗೆ ಸೇರಿದ್ದಾಗಿದೆ ಎಂದು ತಿಳಿದುಬಂದಿತು. ತಕ್ಷಣವೇ ಅಭಿನವ್ ಪ್ರಕಾಶ್ ಅವರನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ 

ಈ ಅಭಿನವ್ ಪ್ರಕಾಶ್ ನ ಸ್ನೇಹಿತರಾದ ರಾಕೇಶ್ ಅಲಿಯಾಸ್ ಬಂಟಿ ಹಾಗೂ ಕುನಾಲ್ ಸೆಹ್ರವಾತ್ ಮನಾಲಿಗೆ ರೋಡ್ ಟ್ರಿಪ್ ಮೂಲಕ ತೆರಳಿದ್ದರು ಆಗ ಮನಾಲಿಯಲ್ಲಿ ಇಬ್ಬರು ಯುವತಿಯರೊಂದಿಗೆ ಪರಿಚಯವಾಗಿತ್ತು ಆ ಇಬ್ಬರೂ ಯುವತಿಯರು ಪುಣೆಗೆ ಎಸ್ ಜಿ 8938 ವಿಮಾನದಲ್ಲೇ ತೆರಳಬೇಕಿತ್ತು. ಆದರೆ ಯುವತಿಯರೊಂದಿಗೆ ಹೆಚ್ಚು ಸಮಯ ಕಳೆಯಬೇಕಾಗಿದ್ದರಿಂದ ರಾಕೇಶ್ ಅಲಿಯಾಸ್ ಬಂಟಿ ಹಾಗೂ ಕುನಾಲ್ ಸೆಹ್ರವಾತ್ ಅಭಿನವ್ ಪ್ರಕಾಶ್ ಗೆ ವಿಮಾನ ಟೇಕ್ ಆಫ್ ಮಾಡುವುದನ್ನು ವಿಳಂಬ ಮಾಡುವುದಕ್ಕೆ ಉಪಾಯ ಹುಡುಕಲು ಮನವಿ ಮಾಡಿದ್ದರು. ಕೊನೆಗೆ ಮೂವರೂ ಸೇರಿ ಹುಸಿ ಬಾಂಬ್ ಕರೆ ಮೂಲಕ ತಮ್ಮ ಯೋಜನೆಯನ್ನು ಯಶಸ್ವಿಯಾಗಿಸಿಕೊಳ್ಳಲು ನಿರ್ಧರಿಸಿದ್ದೇ ಈ ಹೈಡ್ರಾಮಾಗೆ ಕಾರಣ ಎಂಬುದು ವಿಚಾರಣೆಯ ವೇಳೆ ತಿಳಿದುಬಂದಿದೆ. ಅಭಿನವ್ ನ ಇಬ್ಬರೂ ಸ್ನೇಹಿತರು ಈಗ ನಾಪತ್ತೆಯಾಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com