ಜಾರ್ಖಂಡ್‌; ರಾತ್ರಿಯಲ್ಲಿ 17 ಕಿಮೀ ನಡೆದ ಇಲ್ಲಿನ 60ಕ್ಕೂ ಹೆಚ್ಚು ವಿದ್ಯಾರ್ಥಿನಿಯರು, ಯಾಕೆಂಬ ಮಾಹಿತಿ ಇಲ್ಲಿದೆ...

60ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ತಮ್ಮ ವಸತಿ ಶಾಲೆಯಿಂದ ನುಸುಳಿ ರಾತ್ರಿಯಲ್ಲಿ ನಿರ್ಜನ ರಸ್ತೆಗಳ ಮೂಲಕ 17 ಕಿಮೀ ನಡೆದು ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಗೆ ತಲುಪಿದ್ದಾರೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಚೈಬಾಸಾ: 60ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ತಮ್ಮ ವಸತಿ ಶಾಲೆಯಿಂದ ನುಸುಳಿ ರಾತ್ರಿಯಲ್ಲಿ ನಿರ್ಜನ ರಸ್ತೆಗಳ ಮೂಲಕ 17 ಕಿಮೀ ನಡೆದು ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಗೆ ತಲುಪಿದ್ದಾರೆ.
ಈ ವೇಳೆ ತಮ್ಮ ಹಾಸ್ಟೆಲ್ ವಾರ್ಡನ್ ಮಾಡಿದ 'ದೌರ್ಜನ್ಯ'ದ ಕುರಿತು ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.

ಖುಂಟ್ಪಾನಿಯ ಕಸ್ತೂರಬಾ ಗಾಂಧಿ ವಸತಿ ಬಾಲಕಿಯರ ಶಾಲೆಯ 11 ನೇ ತರಗತಿ ವಿದ್ಯಾರ್ಥಿನಿಯರು ಸೋಮವಾರ ಬೆಳಿಗ್ಗೆ 7 ಗಂಟೆ ಸುಮಾರಿಗೆ ಚೈಬಾಸಾದಲ್ಲಿರುವ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಜಿಲ್ಲಾಧಿಕಾರಿ ಅನನ್ಯಾ ಮಿತ್ತಲ್ ಅವರಿಗೆ ದೂರು ಸಲ್ಲಿಸಿದರು.

ವಿದ್ಯಾರ್ಥಿನಿಯರ ಈ ನಡೆಯು ಜಿಲ್ಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳಲ್ಲಿ ಸಂಚಲನ ಉಂಟುಮಾಡಿದೆ.

ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಜಿಲ್ಲಾ ಶಿಕ್ಷಣಾಧಿಕಾರಿ (ಡಿಎಸ್‌ಇ) ಅಭಯಕುಮಾರ್ ಶಿಲ್ ಅವರು ಸ್ಥಳಕ್ಕಾಗಮಿಸಿ ವಿದ್ಯಾರ್ಥಿಗಳ ಕುಂದುಕೊರತೆಗಳನ್ನು ಆಲಿಸಿ, ವಾಹನಗಳಲ್ಲಿ ಮರಳಿ ಶಾಲೆಗೆ ಕಳುಹಿಸಿದರು. ಈ ಬಗ್ಗೆ ತನಿಖೆ ನಡೆಸಿ ವಾರ್ಡನ್ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಬಾಲಕಿಯರಿಗೆ ಭರವಸೆ ನೀಡಿದರು.

ಹಳಸಿದ ಆಹಾರವನ್ನು ತಿನ್ನಲು ನೀಡಲಾಗುತ್ತದೆ, ಸ್ವಚ್ಛ ಶೌಚಾಲಯಗಳಿಲ್ಲ ಮತ್ತು ಕೆಳವರ್ಗದ ವಿದ್ಯಾರ್ಥಿಗಳನ್ನು ಚಳಿಯಲ್ಲಿ ನೆಲದ ಮೇಲೆ ಮಲಗಲು ಹೇಳುತ್ತಾರೆ. ಈ ಬಗ್ಗೆ ಪ್ರತಿಭಟಿಸಿದರೆ ವಾರ್ಡನ್ ಅವರನ್ನು ಥಳಿಸಿದ್ದಾರೆ ಎಂದು ವಿದ್ಯಾರ್ಥಿಗಳು ಡಿಎಸ್‌ಇಗೆ ತಿಳಿಸಿದರು.

ಅಲ್ಲದೆ, ಶಾಲೆಗೆ ಭೇಟಿ ನೀಡಿದಾಗ ಹಿರಿಯ ಅಧಿಕಾರಿಗಳಿಗೆ ಸುಳ್ಳು ಹೇಳುವಂತೆ ವಾರ್ಡನ್ ವಿದ್ಯಾರ್ಥಿಗಳನ್ನು ಒತ್ತಾಯಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಚೈಬಾಸಾ ತಲುಪಿದ ನಂತರ, ವಿದ್ಯಾರ್ಥಿನಿಯರು ಸ್ಥಳೀಯ ಕಾಂಗ್ರೆಸ್ ಸಂಸದೆ ಗೀತಾ ಕೋಡಾ ಅವರಿಗೆ ಕರೆ ಮಾಡಿದ್ದಾರೆ. ಅವರು ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ನಂತರ ಈ ವಿಚಾರವನ್ನು ಪರಿಶೀಲಿಸುವಂತೆ ಡಿಎಸ್ಇಗೆ ತಿಳಿಸಿದ್ದಾರೆ.
ಈ ಆರೋಪದ ಬಗ್ಗೆ ತನಿಖೆ ನಡೆಸಲು ತಂಡವನ್ನು ರಚಿಸಲಾಗುವುದು ಎಂದು ಶೀಲ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com