'ಪ್ರಧಾನಿ ಮೋದಿ, ನಿರ್ಮಲಾ ಸೀತಾರಾಮನ್ ಏನನ್ನು ಮರೆಮಾಚುತ್ತಿದ್ದಾರೆ': ಸಚಿವ ರಾಣೆ 'ಆರ್ಥಿಕ ಹಿಂಜರಿತ' ಹೇಳಿಕೆಗೆ ಕಾಂಗ್ರೆಸ್ ಕಿಡಿ
ಜೂನ್ ನಂತರ ಭಾರತ ಆರ್ಥಿಕ ಹಿಂಜರಿತ ಎದುರಿಸಬಹುದು ಎಂಬ ಕೇಂದ್ರ ಸಚಿವ ನಾರಾಯಣ ರಾಣೆ ಅವರ ಹೇಳಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್...
Published: 17th January 2023 10:18 PM | Last Updated: 18th January 2023 05:26 PM | A+A A-

ಜೈರಾಮ್ ರಮೇಶ್
ನವದೆಹಲಿ: ಜೂನ್ ನಂತರ ಭಾರತ ಆರ್ಥಿಕ ಹಿಂಜರಿತ ಎದುರಿಸಬಹುದು ಎಂಬ ಕೇಂದ್ರ ಸಚಿವ ನಾರಾಯಣ ರಾಣೆ ಅವರ ಹೇಳಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಅವರು, ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜನರಿಂದ ಏನನ್ನು ಮರೆಮಾಚುತ್ತಿದ್ದಾರೆ ಎಂದು ಮಂಗಳವಾರ ಪ್ರಶ್ನಿಸಿದ್ದಾರೆ.
ಜೂನ್ ನಂತರ ಭಾರತ ಆರ್ಥಿಕ ಹಿಂಜರಿತವನ್ನು ಎದುರಿಸುವ ಸಾಧ್ಯತೆ ಇದೆ. ಆದರೆ ಅಂತಹ ಪರಿಸ್ಥಿತಿಯನ್ನು ತಪ್ಪಿಸಲು ಕೇಂದ್ರ ಸರ್ಕಾರ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಕೇಂದ್ರ ಸಣ್ಣ ಮತ್ತು ಮಧ್ಯಮ ಉದ್ಯಮಗಳ(MSME) ಸಚಿವ ನಾರಾಯಣ ರಾಣೆ ಅವರು ಸೋಮವಾರ ಪುಣೆಯಲ್ಲಿ ಸುದ್ದಿಗಾರರಿಗೆ ತಿಳಿಸಿದ್ದರು.
ಇದನ್ನು ಓದಿ: ಸುಳ್ಳು ಸುದ್ದಿ ಹರಡಲು ಸಿ.ಟಿ ರವಿ ನೇತೃತ್ವದಲ್ಲಿ ಪ್ರತ್ಯೇಕ ವಾಟ್ಸಾಪ್ ವಿಭಾಗ ರಚನೆ: ಕಾಂಗ್ರೆಸ್ ಟೀಕೆ
ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಈಗಾಗಲೇ ಆರ್ಥಿಕ ಹಿಂಜರಿತವನ್ನು ಎದುರಿಸುತ್ತಿವೆ ಎಂದು ಸಹ ಕೇಂದ್ರ ಸಚಿವರು ಹೇಳಿದ್ದರು.
"2014 ರಿಂದ MSME ಗಳನ್ನು ನಾಶ ಮಾಡಿರುವ ಕೇಂದ್ರ ಸಚಿವ ನಾರಾಯಣ ರಾಣೆ ಅವರು- 6 ತಿಂಗಳ ನಂತರ ದೇಶ ಆರ್ಥಿಕ ಹಿಂಜರಿತ ಎದುರಿಸುವ ಮುನ್ಸೂಚನೆ ನೀಡಿದ್ದಾರೆ. ಪ್ರಧಾನಿ(ನರೇಂದ್ರ ಮೋದಿ) ಮತ್ತು ಹಣಕಾಸು ಸಚಿವರು(ನಿರ್ಮಲಾ ಸೀತಾರಾಮನ್) ಜನರಿಂದ ಏನನ್ನು ಮರೆಮಾಮಾಚುತ್ತಿದ್ದಾರೆ?" ಎಂದು ಜೈರಾಮ್ ರಮೇಶ್ ಟ್ವಿಟ್ಟರ್ ನಲ್ಲಿ ಪ್ರಶ್ನಿಸಿದ್ದಾರೆ.