
ಸಂಗ್ರಹ ಚಿತ್ರ
ಜಮ್ಮು: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಎರಡು ಐಇಡಿಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
ಭಾನುವಾರ ಸಂಜೆ ರಜೌರಿಯಿಂದ 4 ಕಿಮೀ ದೂರದಲ್ಲಿರುವ ದಾಸ್ಸಾಲ್ ಗ್ರಾಮದಲ್ಲಿ ಪೊಲೀಸರು, ಸೇನೆ ಮತ್ತು ಸಿಆರ್‌ಪಿಎಫ್ ಪಡೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಐಇಡಿಗಳು ಪತ್ತೆಯಾಗಿದ್ದವು. ಗುಪ್ತಚರ ದಳ ನೀಡಿದ ಮಾಹಿತಿಯ ಮೇರೆಗೆ ಕಾರ್ಯಾಚರಣೆ ಕೈಗೊಂಡಾಗ ಐಇಡಿಗಳು ಪತ್ತೆಯಾಗಿದ್ದವು ಎಂದು ಮಾಹಿತಿ ನೀಡಿದ್ದಾರೆ.
ಕಾರ್ಯಾಚರಣೆ ವೇಳೆ ವಶಕ್ಕೆ ಪಡೆಯಲಾದ ಐಇಡಿಗಳನ್ನು ಚಿಂಗಸ್ ಅರಣ್ಯ ಪ್ರದೇಶದಲ್ಲಿ ಬಾಂಬ್ ನಿಷ್ಕ್ರಿಯ ದಳದ ತಂಡದಿಂದ ನಿಷ್ಕ್ರಿಯಗೊಳಿಸಲಾಯಿತು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ, ಗಣರಾಜ್ಯೋತ್ಸವಕ್ಕೆ ಸಿದ್ಧತೆ: ಬಿಗಿ ಭದ್ರತೆ ನಡುವೆಯೂ ಜಮ್ಮುನಲ್ಲಿ ಅವಳಿ ಸ್ಫೋಟ; 7 ಮಂದಿಗೆ ಗಾಯ
ಐಇಡಿ ಪತ್ತೆಯಾದ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದಾದ್ಯಂತ ಭದ್ರತಾ ಪಡೆಗಳು ಮತ್ತಷ್ಟು ಅಲರ್ಟ್‌ನಲ್ಲಿದ್ದಾರೆ, ಈಗಾಗಲೇ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತ್ ಜೋಡೋ ಯಾತ್ರೆ ನಡೆಯುತ್ತಿದ್ದು, ಗಣರಾಜ್ಯೋತ್ಸವ ದಿನಾಚರಣೆ ಕೂಡ ಹತ್ತಿರಬರುತ್ತಿರುವುದರಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ ಎಂದು ತಿಳಿದುಬಂದಿದೆ.
ಈ ನಡುವೆ ಜಮ್ಮುವಿನ ನರ್ವಾಲ್ ಪ್ರದೇಶದಲ್ಲಿ ಶನಿವಾರ ನಡೆದ ಎರಡು ಸ್ಫೋಟ ಪ್ರಕರಣಗಳಲ್ಲಿ ಒಂಬತ್ತು ಮಂದಿ ಗಾಯಗೊಂಡಿದ್ದು, ಕಳೆದ ವಾರ ರಜೌರಿಯ ಖೋರಾ ಗ್ರಾಮದಲ್ಲಿ ಮತ್ತೊಂದು ಐಇಡಿ ವಶಪಡಿಸಿಕೊಂಡ ಬಳಿಕ ಹೆಚ್ಚು ಅಲರ್ಟ್ ಆಗಿರುವಂತೆ ಭದ್ರತಾಪಡೆಗಳಿಗೆ ಸೂಚನೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.