ಕೇರಳ ರಾಜಕೀಯ ಪಕ್ಷಗಳಿಂದ ಮೋದಿ ಕುರಿತ ವಿವಾದಿತ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ: ಸಿಎಂ ಮಧ್ಯಪ್ರವೇಶಕ್ಕೆ ಬಿಜೆಪಿ ಆಗ್ರಹ
ಕೇರಳದ ಸಿಪಿಎಂ, ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್‌ನಂತಹ ವಿವಿಧ ರಾಜಕೀಯ ಪಕ್ಷಗಳು ವಿವಾದಾತ್ಮಕ ಬಿಬಿಸಿ ಸಾಕ್ಷ್ಯಚಿತ್ರ 'ಇಂಡಿಯಾ: ದಿ ಮೋದಿ ಕ್ವೆಶ್ಶನ್' ಅನ್ನು ಮಂಗಳವಾರ ರಾಜ್ಯದಲ್ಲಿ ಪ್ರದರ್ಶಿಸುವ ನಿರ್ಧಾರ ಪ್ರಕಟಿಸಿವೆ.
Published: 24th January 2023 04:17 PM | Last Updated: 24th January 2023 08:20 PM | A+A A-

ಪ್ರಧಾನಿ ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರ
ತಿರುವನಂತಪುರಂ: ಕೇರಳದ ಸಿಪಿಎಂ, ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್‌ನಂತಹ ವಿವಿಧ ರಾಜಕೀಯ ಪಕ್ಷಗಳು ವಿವಾದಾತ್ಮಕ ಬಿಬಿಸಿ ಸಾಕ್ಷ್ಯಚಿತ್ರ 'ಇಂಡಿಯಾ: ದಿ ಮೋದಿ ಕ್ವೆಶ್ಶನ್' ಅನ್ನು ಮಂಗಳವಾರ ರಾಜ್ಯದಲ್ಲಿ ಪ್ರದರ್ಶಿಸುವ ನಿರ್ಧಾರ ಪ್ರಕಟಿಸಿವೆ.
ಈ ವಿಚಾರದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮಧ್ಯಪ್ರವೇಶಿಸಬೇಕು ಮತ್ತು ಇಂತಹ ಪ್ರಯತ್ನಗಳಿಗೆ ಕಡಿವಾಣ ಹಾಕುವಂತೆ ಬಿಜೆಪಿ ಒತ್ತಾಯಿಸಿದೆ. ಕೇಂದ್ರ ಸರ್ಕಾರವು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಮೂಲಕ ದೇಶದಲ್ಲಿ ಸಾಕ್ಷ್ಯಚಿತ್ರದ ಪ್ರಸಾರವನ್ನು ನಿರ್ಬಂಧಿಸಿದೆ.
2002ರಲ್ಲಿ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ನಡೆದಿದ್ದ ಗೋಧ್ರೋತ್ತರ ಹಿಂಸಾಚಾರಕ್ಕೆ ಸಂಬಂಧಿಸಿದಂತಹ ಕೆಲವು ವಿಷಯಗಳ ತನಿಖೆಯ ವಿಷಯವಿದು ಎಂದು ಸಾಕ್ಷ್ಯಚಿತ್ರದಲ್ಲಿ ಹೇಳಲಾಗಿದೆ. ಎರಡು ಭಾಗಗಳ ಸಾಕ್ಷ್ಯಚಿತ್ರದ ಎರಡನೇ ಭಾಗ ಇಂದು ಬಿಡುಗಡೆಯಾಗಲಿದೆ.
ಇದನ್ನು ಓದಿ: ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳ ಗುಂಪಿನಿಂದ ಪ್ರಧಾನಿ ಮೋದಿ ಕುರಿತ BBCಯ ವಿವಾದಿತ ಸಾಕ್ಷ್ಯಚಿತ್ರ ಪ್ರದರ್ಶನ!
ಸಿಪಿಐ(ಎಂ) ಯುವ ಘಟಕ, ಡಿವೈಎಫ್‌ಐ, ಈ ಸಾಕ್ಷ್ಯಚಿತ್ರವನ್ನು ರಾಜ್ಯಾದ್ಯಂತ ಕ್ಯಾಂಪಸ್‌ಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸಲಾಗುವುದು ಎಂದು ತನ್ನ ಫೇಸ್‌ಬುಕ್ ಪುಟದಲ್ಲಿ ಪ್ರಕಟಿಸುವ ಮೂಲಕ ರಾಜ್ಯದಲ್ಲಿ ರಾಜಕೀಯ ಬಿರುಗಾಳಿ ಎಬ್ಬಿಸಿದೆ.
ಕೋಝಿಕ್ಕೋಡ್ ಮುತಾಲಕುಲಂನಲ್ಲಿ ಮಂಗಳವಾರ ಮಧ್ಯಾಹ್ನದಿಂದ ಈ ಸಾಕ್ಷ್ಯಚಿತ್ರದ ಪ್ರದರ್ಶನ ಪ್ರಾರಂಭವಾಗಿದೆ ಮತ್ತು ಸಂಜೆ ತಿರುವನಂತಪುರಂನ ಪೂಜಾಪುರ ಮೈದಾನದಲ್ಲಿ ಪ್ರದರ್ಶನಗೊಳ್ಳಲಿದೆ. ರಾಜ್ಯದ 2000 ಕೇಂದ್ರಗಳಲ್ಲಿ ಸಾಕ್ಷ್ಯಚಿತ್ರ ಪ್ರದರ್ಶನವಾಗಲಿದೆ ಎಂದು ರಾಜ್ಯಾಧ್ಯಕ್ಷ ವಿ ವಸೀಫ್ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.