ಭಾರತ್ ಜೋಡೋ ಯಾತ್ರೆಯಲ್ಲಿ ಯಾವುದೇ ಭದ್ರತಾ ಲೋಪವಾಗಿಲ್ಲ- ಜಮ್ಮು-ಕಾಶ್ಮೀರ ಪೊಲೀಸರು

ಭಾರತ್ ಜೋಡೋ ಯಾತ್ರೆಯಲ್ಲಿ ಯಾವುದೇ ಭದ್ರತಾ ಲೋಪವಾಗಿಲ್ಲ ಎಂದು ಜಮ್ಮು-ಕಾಶ್ಮೀರ ಪೊಲೀಸ್ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ
ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ

ಕಾಶ್ಮೀರ: ಭಾರತ್ ಜೋಡೋ ಯಾತ್ರೆಯಲ್ಲಿ ಯಾವುದೇ ಭದ್ರತಾ ಲೋಪವಾಗಿಲ್ಲ ಎಂದು ಜಮ್ಮು-ಕಾಶ್ಮೀರ ಪೊಲೀಸ್ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಬನಿಹಾಲ್ ನಿಂದ ಹೊರಟ ಯಾತ್ರೆಯಲ್ಲಿ ಹೆಚ್ಚಿನ ಜನರು ಸೇರುತ್ತಾರೆ ಎಂಬುದರ ಬಗ್ಗೆ ಆಯೋಜಕರು ಪೊಲೀಸರಿಗೆ ಯಾವುದೇ ಮಾಹಿತಿ ನೀಡಿರಲಿಲ್ಲ ಎಂದು ಪೊಲೀಸರು ಸಮರ್ಥಿಸಿಕೊಂಡಿದ್ದಾರೆ. 

ಭಾರತ್ ಜೋಡೋ ಯಾತ್ರೆ ಸ್ಥಗಿತಕ್ಕೂ ಮುನ್ನ ಜಮ್ಮು-ಕಾಶ್ಮೀರ ಪೊಲೀಸರೊಂದಿಗೆ ಸಮಾಲೋಚನೆ ನಡೆಸಿಲ್ಲ. ನಾವು ಸಂಪೂರ್ಣ ಭದ್ರತೆ ಒದಗಿಸಿದ್ದೇವೆ ಎಂದು ಕಾಶ್ಮೀರ ಕಣಿವೆ ಭದ್ರತಾ ಉಸ್ತುವಾರಿ ಹೊತ್ತಿರುವ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ವಿಜಯ್ ಕುಮಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ಜವಹರ್ ಸುರಂಗದ ಮೂಲಕ ಯಾತ್ರೆ ಬನಿಹಾಲ್ ದಾಟಿದಾಗ ದುರಾದೃಷ್ಟವಶಾತ್ ಪೊಲೀಸರು ಮಾಡಿದ್ದ ಭದ್ರತಾ ವ್ಯವಸ್ಥೆಯಲ್ಲಿ ಸಂಪೂರ್ಣವಾಗಿ ಲೋಪವಾಗಿದ್ದರಿಂದ ಯಾತ್ರೆಯನ್ನು ಸ್ಥಗಿತಗೊಳಿಸಬೇಕಾಯಿತು ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.

ಆಯೋಜಕರು ಗುರುತಿಸಿದ ಅಧಿಕೃತ ವ್ಯಕ್ತಿಗಳಿಗೆ ಮಾತ್ರ ಯಾತ್ರೆ ಸಾಗುವ ಮಾರ್ಗದ ಕಡೆಗೆ ಅವಕಾಶ ನೀಡಲಾಗಿದೆ. ಬನಿಹಾಲ್ ನಿಂದ ಯಾತ್ರೆಯಲ್ಲಿ ಹೆಚ್ಚಿನ ಜನರು ಯಾತ್ರೆಯಲ್ಲಿ ಸೇರುವ ಬಗ್ಗೆ ಭಾರತ್ ಜೋಡೋ ಯಾತ್ರೆಯ ಸಂಘಟಕರು ಯಾವುದೇ ಮಾಹಿತಿ ನೀಡಿರಲಿಲ್ಲ ಎಂದು ಕುಮಾರ್ ತಿಳಿಸಿದ್ದಾರೆ. 

ಯಾತ್ರೆಗೆ ಸಂಪೂರ್ಣ ಭದ್ರತೆ ಕಲ್ಪಿಸಲಾಗಿತ್ತು. ಯಾತ್ರೆಯನ್ನು ಸ್ಥಗಿತಗೊಳಿಸುವ ನಿರ್ಧಾರ ಮಾಡುವ ಮುನ್ನ ಜಮ್ಮು-ಕಾಶ್ಮೀರ ಪೊಲೀಸರೊಂದಿಗೆ ಯಾವುದೇ ಸಮಾಲೋಚನೆ ನಡೆಸಿಲ್ಲ. ಉಳಿದ ಯಾತ್ರೆ ಶಾಂತಯುತವಾಗಿ ಮುಂದುವರೆಯಲಿದೆ. ಎಲ್ಲಿಯೂ ಭದ್ರತಾ ಲೋಪವಾಗಿಲ್ಲ ಎಂದು ವಿಜಯ್ ಕುಮಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com