ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪ್ರತಿವರ್ಷ ಶಾಲಾ ಶೈಕ್ಷಣಿಕ ವರ್ಷ ಕೊನೆಯ ಹೊತ್ತಿಗೆ ವಾರ್ಷಿಕ ಪರೀಕ್ಷೆ ಸಮಯ ಹತ್ತಿರ ಬರುವಾಗ ವಿದ್ಯಾರ್ಥಿಗಳೊಂದಿಗೆ ಪರೀಕ್ಷೆಗೆ ಯಾವ ರೀತಿ ಸಜ್ಜಾಗಬೇಕು, ಪರೀಕ್ಷೆಯನ್ನು ಹೇಗೆ ಎದುರಿಸಬೇಕು, ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಲು ಏನು ಮಾಡಬೇಕೆಂದು ತಿಳಿಸಲು ಸಂವಾದ ನಡೆಸುತ್ತಾರೆ.
ಅದರಂತೆ ಇಂದು ದೆಹಲಿಯಲ್ಲಿ ತಮ್ಮ 'ಪರೀಕ್ಷಾ ಪೆ ಚರ್ಚಾದ 6ನೇ ಆವೃತ್ತಿಯಲ್ಲಿ' (Pariksha Pe Charcha 2023) ವಿದ್ಯಾರ್ಥಿಗಳೊಂದಿಗೆ ಹಲವು ವಿಚಾರಗಳ ಕುರಿತು ಸಂವಾದ ನಡೆಸಿದರು.
ಈ ಸಂದರ್ಭದಲ್ಲಿ ಇಂದಿನ ಶಿಕ್ಷಣ, ವಿದ್ಯಾರ್ಥಿಗಳ ಸ್ವಭಾವ, ಮನೆಯಲ್ಲಿ ಪೋಷಕರ ಸ್ವಭಾವಗಳು, ಯಾವ ರೀತಿ ಸಮಸ್ಯೆಗಳು ಇರುತ್ತವೆ ಎಂಬುದರ ಮೇಲೆ ಬೆಳಕು ಚೆಲ್ಲಿದ್ದಾರೆ, ಅಲ್ಲದೆ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಕೆಲವು ಕಿವಿಮಾತುಗಳನ್ನು ಹೇಳಿದ್ದಾರೆ.
ಅವರ ಸಂವಾದದ ಹೈಲೈಟ್ ಗಳು ಹೀಗಿವೆ: ತಮ್ಮ ಮಗ ಅಥವಾ ಮಗಳು ಪರೀಕ್ಷೆಯಲ್ಲಿ ಚೆನ್ನಾಗಿ ಮಾಡಬೇಕು, ಉತ್ತಮ ಅಂಕಗಳನ್ನು ಗಳಿಸಬೇಕೆಂದು ನೆಂಟರ ಮುಂದೆ, ಸಮಾಜದ ಜನರ ಮುಂದೆ ತೋರಿಸಿಕೊಳ್ಳಬೇಕೆಂಬ ಒತ್ತಡವಿದ್ದರೆ ಅದು ಸಮಸ್ಯೆ. ರಾಜಕೀಯದಲ್ಲಿ ಎಷ್ಟೊಂದು ಒತ್ತಡವಿರುತ್ತದೆ ಹೇಳಿ, ಚುನಾವಣೆಯಲ್ಲಿ ಗೆಲ್ಲಲು ಸಾಕಷ್ಟು ಒತ್ತಡವಿರುತ್ತದೆ. ಇಲ್ಲಿ ನಮ್ಮ ಸಾಮರ್ಥ್ಯ ಪರಿಗಣನೆಗೆ ಬರುತ್ತದೆ, ವಿದ್ಯಾರ್ಥಿಗಳ ಸಾಮರ್ಥ್ಯ ಮತ್ತು ನಿರೀಕ್ಷೆಗಳಿಗೆ ಹೊಂದಾಣಿಕೆಯಾಗಬೇಕು. ನೀವು ಮಾಡುತ್ತಿರುವ ಕೆಲಸ, ನಿಮ್ಮ ಗುರಿಯ ಮೇಲೆ ಗಮನ ಕೇಂದ್ರೀಕೃತವಾಗಿರಬೇಕು.
-ಪ್ರತಿವರ್ಷ ಪರೀಕ್ಷೆ ಬಗ್ಗೆ ಸಲಹೆ ಕೊಡಿ ಎಂದು ವಿದ್ಯಾರ್ಥಿಗಳು ನನಗೆ ಪತ್ರ ಬರೆಯುತ್ತಾರೆ. ಮಕ್ಕಳು ಬರೆದ ಪತ್ರ ಓದುವುದೆಂದರೆ ನನಗೆ ಬಹಳ ಸ್ಫೂರ್ತಿ ಮತ್ತು ವಿಶಿಷ್ಟ ಅನುಭವ ಕೊಡುತ್ತದೆ.
-ನಿಮ್ಮ ಮನೆಯಲ್ಲಿ ಅಮ್ಮ ಹೇಗೆ ಕೆಲಸ ಮಾಡುತ್ತಾರೆ, ಅವರು ಸಮಯದ ನಿರ್ವಹಣೆ ಯಾವ ರೀತಿ ಮಾಡುತ್ತಾರೆ ಎಂದು ಗಮನಿಸಿದ್ದೀರಾ ಎಂದು ಮೋದಿಯವರು ಮಕ್ಕಳಲ್ಲಿ ಪ್ರಶ್ನೆ ಕೇಳಿದರು. ಒಬ್ಬ ತಾಯಿಯಾದವಳು ತಾನು ಸಾಕಷ್ಟು ಕೆಲಸ ಮಾಡುತ್ತಿದ್ದರೂ ಸುಸ್ತಾಯಿತು, ಅಬ್ಬಾ ಸಾಕಾಯ್ತು ಎಂದು ಹೇಳುವುದಿಲ್ಲ, ನಿಮ್ಮ ತಾಯಿಯನ್ನು ನೋಡಿ ಸಮಯದ ನಿರ್ವಹಣೆ ಹೇಗೆ ಮಾಡಬೇಕೆಂದು ಕಲಿತುಕೊಳ್ಳಿ ಎಂದು ಮೋದಿ ಮಕ್ಕಳಿಗೆ ಕಿವಿಮಾತು ಹೇಳಿದರು.
-ಮಕ್ಕಳ ಮೇಲೆ ಒತ್ತಡ ಹಾಕಬೇಡಿ ಎಂದು ಪೋಷಕರಿಗೂ ಇದೇ ಸಂದರ್ಭದಲ್ಲಿ ಮೋದಿ ಸಲಹೆ ನೀಡಿದರು. ಅದೇ ರೀತಿ ವಿದ್ಯಾರ್ಥಿಗಳು ಕೂಡ ತಮ್ಮ ಸಾಮರ್ಥ್ಯವನ್ನು ಕಡೆಗಣಿಸಬಾರದು. ಟೀಕೆ ಮತ್ತು ಅಡಚಣೆಯ ನಡುವೆ ಸಣ್ಣ ವ್ಯತ್ಯಾಸವಿರುವುದು. ಪೋಷಕರು ರಚನಾತ್ಮಕ, ಸಕಾರಾತ್ಮಕ ರೀತಿಯಲ್ಲಿ ಮಕ್ಕಳನ್ನು ಟೀಕಿಸಬೇಕು.
-ಕೆಲವು ವಿದ್ಯಾರ್ಥಿಗಳು ತಮ್ಮ ಸೃಜನಶೀಲತೆಯನ್ನು ಪರೀಕ್ಷೆಗಳಲ್ಲಿ 'ಮೋಸ' ಮಾಡಲು ಬಳಸುತ್ತಾರೆ ಆದರೆ ಆ ವಿದ್ಯಾರ್ಥಿಗಳು ತಮ್ಮ ಸಮಯ ಮತ್ತು ಸೃಜನಶೀಲತೆಯನ್ನು ಉತ್ತಮ ರೀತಿಯಲ್ಲಿ ಬಳಸಿದರೆ ಅವರು ಯಶಸ್ಸಿನ ಎತ್ತರವನ್ನು ಏರಬಹುದು. ನಾವು ಎಂದಿಗೂ ಜೀವನದಲ್ಲಿ ಶಾರ್ಟ್‌ಕಟ್‌ಗಳನ್ನು ಆರಿಸಿಕೊಳ್ಳಬಾರದು, ನಮ್ಮ ಮೇಲೆ ಗಮನ ಕೇಂದ್ರೀಕರಿಸಿಕೊಳ್ಳಬೇಕು.
-ಪರೀಕ್ಷೆಯ ಸಮಯದಲ್ಲಿ ಸಾಕಷ್ಟು ಪ್ರಯತ್ನಗಳನ್ನು ಮಾಡುವ ವಿದ್ಯಾರ್ಥಿಗಳಿಗೆ ನನ್ನ ಸಲಹೆ ನಿಮ್ಮ ಪ್ರಯತ್ನಗಳು ಎಂದಿಗೂ ವ್ಯರ್ಥವಾಗುವುದಿಲ್ಲ.
Advertisement