ಜಾರ್ಖಂಡ್: ಧನ್‌ಬಾದ್ ಆಸ್ಪತ್ರೆಯಲ್ಲಿ ಅಗ್ನಿ ಅವಘಡ, ವೈದ್ಯ ದಂಪತಿ ಸೇರಿ ಐವರು ಸಾವು
ಜಾರ್ಖಂಡ್ ನ ಧನ್‌ಬಾದ್‌ನಲ್ಲಿರುವ ಆರ್ತಿ ಸ್ಮಾರಕ ನರ್ಸಿಂಗ್ ಹೋಂನ ಸ್ಟೋರ್ ರೂಮ್‌ನಲ್ಲಿ ಅಗ್ನಿ ಅವಘಡ ಸಂಭವಿಸಿ ವೈದ್ಯ ದಂಪತಿ ಸೇರಿದಂತೆ ಐವರು ಮೃತಪಟ್ಟಿರುವ ಘಟನೆ ಶನಿವಾರ ನಡೆದಿದೆ.
Published: 28th January 2023 04:00 PM | Last Updated: 28th January 2023 07:38 PM | A+A A-

ಧನ್‌ಬಾದ್ ಆಸ್ಪತ್ರೆಯಲ್ಲಿ ಅಗ್ನಿ ಅವಘಡ
ಧನ್‌ಬಾದ್: ಜಾರ್ಖಂಡ್ ನ ಧನ್‌ಬಾದ್‌ನಲ್ಲಿರುವ ಆರ್ತಿ ಸ್ಮಾರಕ ನರ್ಸಿಂಗ್ ಹೋಂನ ಸ್ಟೋರ್ ರೂಮ್‌ನಲ್ಲಿ ಅಗ್ನಿ ಅವಘಡ ಸಂಭವಿಸಿ ವೈದ್ಯ ದಂಪತಿ ಸೇರಿದಂತೆ ಐವರು ಮೃತಪಟ್ಟಿರುವ ಘಟನೆ ಶನಿವಾರ ನಡೆದಿದೆ.
ಆಸ್ಪತ್ರೆಯ ವೈದ್ಯ ದಂಪತಿಗಳಾದ ಡಾ. ವಿಕಾಶ್ ಹಜ್ರಾ(75) ಮತ್ತು ಡಾ ಪ್ರೇಮಾ ಹಜ್ರಾ ಸೇರಿದಂತೆ ಕನಿಷ್ಠ ಐದು ಮಂದಿ ಬೆಂಕಿಯ ಹೊಗೆಯಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.
ಅಗ್ನಿ ಅವಘಡದಲ್ಲಿ ಸಾವನ್ನಪ್ಪಿದ ಇತರರಲ್ಲಿ ಡಾ ಹಜ್ರಾ ಅವರ ಸೋದರಳಿಯ ಮತ್ತು ಇಬ್ಬರು ಆಸ್ಪತ್ರೆ ಸಿಬ್ಬಂದಿ ಸೇರಿದ್ದಾರೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ನಿನ್ನೆ ತಡರಾತ್ರಿ ಆಸ್ಪತ್ರೆಯ ಮೇಲಿನ ಮಹಡಿಯಲ್ಲಿರುವ ವೈದ್ಯರ ನಿವಾಸದ ಪಕ್ಕದಲ್ಲಿರುವ ಸ್ಟೋರ್ ರೂಂನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕ್ರಮೇಣ ಪಕ್ಕದ ಕೋಣೆಗಳಿಗೂ ವ್ಯಾಪಿಸಿ ವೈದ್ಯರ ವಸತಿ ಸಮುಚ್ಚಯದಲ್ಲೂ ಹೊಗೆ ಆವರಿಸಿದೆ. ಅದೃಷ್ಟವಶಾತ್ ಆಸ್ಪತ್ರೆಗೆ ದಾಖಲಾದ ಯಾವುದೇ ರೋಗಿಗಳಿಗೆ ತೊಂದರೆಯಾಗಿಲ್ಲ.
ಎರಡನೇ ಮಹಡಿಯಲ್ಲಿನ ಸ್ಟೋರ್ ರೂಂನಲ್ಲಿ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓದಿ: ಮಧ್ಯ ಪ್ರದೇಶ: ಸ್ಥಗಿತಗೊಂಡಿದ್ದ ಕಲ್ಲಿದ್ದಲು ಗಣಿ ಪ್ರವೇಶಿಸಿದ ನಾಲ್ವರು ವಿಷಕಾರಿ ಅನಿಲ ಸೇವಿಸಿ ಸಾವು
“ಶಾರ್ಟ್ ಸರ್ಕ್ಯೂಟ್‌ನಿಂದ ಸ್ಟೋರ್ ರೂಮ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಪ್ರಾಥಮಿಕವಾಗಿ ತೋರುತ್ತದೆ. ತನಿಖೆ ಇನ್ನೂ ಮುಂದುವರೆದಿದ್ದು, ಮೃತರನ್ನು ಗುರುತಿಸಲಾಗುತ್ತಿದೆ ಎಂದು ಎಸ್‌ಡಿಎಂ ಪ್ರೇಮ್ ಕುಮಾರ್ ತಿವಾರಿ ಹೇಳಿದ್ದಾರೆ.
ಏತನ್ಮಧ್ಯೆ, ಅಗ್ನಿಶಾಮಕ ದಳ ಮತ್ತು ಸ್ಥಳೀಯ ಆಡಳಿತದ ಸಹಾಯದಿಂದ ಇತರ 9 ಜನರನ್ನು ರಕ್ಷಿಸಲಾಗಿದ್ದು, ಅವರನ್ನು ಪಟ್ಲಾಪುತ್ರ ನರ್ಸಿಂಗ್ ಹೋಮ್‌ಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.