97ನೇ ಆವೃತ್ತಿಯ ಮನ್ ಕಿ ಬಾತ್: ಇ-ತ್ಯಾಜ್ಯ ನಿರ್ವಹಣೆ, ಸಿರಿಧಾನ್ಯಗಳ ಮಹತ್ವ ತಿಳಿಸಿದ ಪ್ರಧಾನಿ ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ 97ನೇ ಆವೃತ್ತಿಯ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ್ದು, ಇ-ತ್ಯಾಜ್ಯ ನಿರ್ವಹಣೆ, ಸಿರಿಧಾನ್ಯಗಳ ಮಹತ್ವ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಇದೇ ವೇಳೆ ಪದ್ಮಪ್ರಶಸ್ತಿ ಪುರಸ್ಕೃತರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.
Published: 29th January 2023 01:26 PM | Last Updated: 29th January 2023 01:26 PM | A+A A-

ಪ್ರಧಾನಿ ಮೋದಿ
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ 97ನೇ ಆವೃತ್ತಿಯ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ್ದು, ಇ-ತ್ಯಾಜ್ಯ ನಿರ್ವಹಣೆ, ಸಿರಿಧಾನ್ಯಗಳ ಮಹತ್ವ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಇದೇ ವೇಳೆ ಪದ್ಮಪ್ರಶಸ್ತಿ ಪುರಸ್ಕೃತರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.
ರಾಗಿ ಸೇರಿದಂತೆ ಸಿರಿಧಾನ್ಯಗಳು ಜನರ ಆರೋಗ್ಯ ಹೆಚ್ಚಿಸುತ್ತವೆ. ಜನರು ತಮ್ಮ ಆರೋಗ್ಯಪಾಲನೆಗೆ ಸಿರಿಧಾನ್ಯಗಳ ಸೇವನೆಗೆ ಹೆಚ್ಚು ಒತ್ತುಕೊಡಬೇಕು. ಯೋಗ ಮತ್ತು ಸಿರಿಧಾನ್ಯಗಳನ್ನು ತಮ್ಮ ಜೀವನಶೈಲಿಗೆ ಅಳವಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ಭಾರತದ ಮನವಿ ಮೇರೆಗೆ ವಿಶ್ವಸಂಸ್ಥೆಯು ಅಂತಾರಾಷ್ಟ್ರೀಯ ಯೋಗ ದಿನ ಮತ್ತು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷದ ಆಚರಣೆಯನ್ನು ಘೋಷಿಸಲಾಗಿದೆ ಎಂದ ಅವರು, ದೇಶದ ವಿವಿಧೆಡೆ ಇರುವ ಸಿರಿಧಾನ್ಯ ಉದ್ಯಮಿಗಳ ಶ್ರಮವನ್ನು ಶ್ಲಾಘಿಸಿದರು.
ಕಲಬುರ್ಗಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮಿಲೆಟ್, ಬೀದರ್ನ ಹುಲ್ಸೂರು ಮಹಿಳಾ ಕಿಸಾನ್ ಮಿಲೆಟ್ ಕಂಪನಿಯ ಕಾರ್ಯಗಳನ್ನೂ ಪ್ರಸ್ತಾಪಿಸಿದ ಅವರು, ಹಾಡಿ ಹೊಗಳಿದರು.
ಹಾಗೆಯೇ, ಭಾರತದಲ್ಲಿ ನಡೆಯುತ್ತಿರುವ ಜಿ20 ಸಭೆ ಕಾರ್ಯಕ್ರಮಗಳಲ್ಲಿ ಸಿರಿಧಾನ್ಯಯುಕ್ತ ಆಹಾರಗಳನ್ನು ತಯಾರಿಸಿ ಕೊಡಲಾಗುತ್ತಿದೆ ಎಂದ ಅವರು ರಾಗಿ ಪಾಯಸ ಮೊದಲಾದ ಖಾದ್ಯಗಳನ್ನು ಉಲ್ಲೇಖಿಸಿದರು.
ಬಳಿಕ ಇಂಡಿಯಾ: ದಿ ಮದರ್ ಆಫ್ ಡೆಮಾಕ್ರಸಿ ಪುಸ್ತಕದ ಬಗ್ಗೆ ಕೆಲ ಹೊತ್ತು ಮಾತನಾಡಿದರು. ಭಾರತದಲ್ಲಿ ಪ್ರಜಾತಂತ್ರದ ಭವ್ಯ ಇತಿಹಾಸದ ಬಗ್ಗೆ ಮಾತನಾಡಿದರು.
ಈ ವೇಳೆ ಬಸವಣ್ಣರ ಅನುಭವ ಮಂಟಪವನ್ನೂ ಅವರು ಉಲ್ಲೇಖಿಸಿ ಮಾತನಾಡಿದರು. ಧರ್ಮೇಂದ್ರ ಪ್ರಧಾನ್ ಬರೆದಿರುವ “ಇಂಡಿಯಾ: ದಿ ಮದರ್ ಆಫ್ ಡೆಮಾಕ್ರಸಿ” ಪುಸ್ತಕವನ್ನು ಪ್ರತಿಯೊಬ್ಬ ಭಾರತೀಯರೂ ಓದಬೇಕು ಎಂದು ಕರೆ ನೀಡಿದರು.
“ಪ್ರಜಾತಂತ್ರ ನಮ್ಮ ನರನಾಡಿಗಳಲ್ಲೇ ಇದೆ. ನಮ್ಮ ಸಂಸ್ಕೃತಿಯ ಭಾಗವಾಗಿದೆ. ಶತಮಾನಗಳ ಹಿಂದಿನಿಂದಲೂ ಪ್ರಜಾಪ್ರಭುತ್ವ ವ್ಯವಸ್ಥೆಯ ನಾಡು ಭಾರತವಾಗಿದೆ. ಸ್ವಾಭಾವಿಕವಾಗಿ ನಮ್ಮದು ಪ್ರಜಾಪ್ರಭುತ್ವದ ಸಮಾಜ” ಎಂದು ಹೇಳಿದರು.
ಜಾಗತಿಕವಾಗಿ ಹವಾಮಾನ ಬದಲಾವಣೆ ವಿರುದ್ಧ ನಡೆಯುತ್ತಿರುವ ಹೋರಾಟದ ಕುರಿತಂತೆಯೂ ಮೋದಿಯವರು ಮಾತನಾಡಿದರು. ಹವಾಮಾನ ಬದಲಾವಣೆ ಅದೆಷ್ಟು ಗಂಭೀರ ಸಮಸ್ಯೆ ಎಂದು ತಿಳಿಸಿದ.
ಬಳಿಕ ಇ–ತ್ಯಾಜ್ಯ ಮರುಬಳಕೆ ಬಗ್ಗೆ ಜಾಗೃತಿ ಮೂಡಿಸಿದರು. ಭಾರತದಲ್ಲಿ ತಯಾರಾಗುತ್ತಿರುವ ಎಲೆಕ್ಟ್ರಾನಿಕ್ ತ್ಯಾಜ್ಯಗಳು ಪರಿಸರಕ್ಕೆ ಮಾರಕವಾಗಿದೆ ಎಂದ ಅವರು ಇ–ವೇಸ್ಟ್ ರೀಸೈಕ್ಲಿಂಗ್ ಕಾರ್ಯಗಳಲ್ಲಿ ಬಹಳಷ್ಟು ಸಂಘ ಸಂಸ್ಥೆಗಳು ತೊಡಗಿಸಿಕೊಳ್ಳುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಲಬುರಗಿಯ ತಡಕಲ್‌ನ ಆಳಂದ ಭೂತಾಯಿ ರೈತರ ಕಂಪನಿಗೆ ಪ್ರಶಂಸೆ
ಇದೇ ವೇಳೆ ಕಲಬುರಗಿಯ ತಡಕಲ್‌ನಲ್ಲಿ ಕಳೆದ ಕಿರುಧಾನ್ಯಗಳಿಂತ ತಯಾರಿಸಿದ ಲಡ್ಡು, ಕುರುಕಲು ತಿಂಡಿ ಸೇರಿದಂತೆ ಮೌಲ್ಯವರ್ಧಿತ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ, ರೈತರ ಆದಾಯ ವೃದ್ಧಿಗೆ ನೆರವಾಗಿರುವ ಆಳಂದ ಭೂತಾಯಿ ರೈತರ ಕಂಪನಿಯನ್ನು ಮೋದಿ ಅವರು ಶ್ಲಾಘಿಸಿದರು.
ನಾನು ನಿಮ್ಮಲ್ಲೊಂದು ಸಂಗತಿಯನ್ನು ಕೇಳುವೆ. ನೀವು ಎಂಟ್ರೆಪ್ರೆನ್ಯೂರ್ ಎಂಬುದನ್ನು ಕೇಳಿರಬಹುದು. ಆದರೆ ಮಿಲೆಟ್‌ಪ್ರೆನ್ಯೂರ್ ಬಗ್ಗೆ ಕೇಳಿದ್ದೀರಾ? ಒಡಿಶಾ, ಕರ್ನಾಟಕ ಸೇರಿದಂತೆ ನಾನಾ ರಾಜ್ಯಗಳಲ್ಲಿ ಇವತ್ತು ಮಿಲೆಟ್‌ಪ್ರೆನ್ಯೂರ್‌ಗಳ ಸಂಖ್ಯೆ ಹೆಚ್ಚುತ್ತಿದೆ.
ಕರ್ನಾಟಕದ ಕಲಬುರಗಿಯ ತಡಕಲ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಆಳಂದ ಭೂತಾಯಿ ಕಿರುಧಾನ್ಯ ರೈತರ ಉತ್ಪಾದಕ ಕಂಪನಿಯನ್ನು ಪ್ರಸ್ತಾಪಿಸಿದ ಅವರು, ಈ ಸಂಸ್ಥೆಯು ಕಿರುಧಾನ್ಯಗಳಿಂದ ಲಡ್ಡು, ಬಿಸ್ಕತ್, ಕುರುಕುಲು ತಿಂಡಿಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದು, ಜನಪ್ರಿಯತೆ ಗಳಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.